ಮನೆಯ ಮೇಲೆ ಕಾಡು
ಮಾಡಿದಾಗ, ಈ ಕಾಡು ಬರೇ ಹಸಿರಿಗೇ ಮಾತ್ರ ಇರಬೇಕಾಗಿಲ್ಲ. ಕಾಡಿನ ಒಂದೊಂದು ಮೂಲೆಯಲ್ಲೂ ಕಾವ್ಯವನ್ನು
ಅರಳಿಸಲು ಸಾಧ್ಯವಿದೆ.
ಕಾಡಿನ ಒಂದು ವಿಶೇಷವೆಂದರೆ ದಟ್ಟವಾಗಿ ಇರುವ ಗಿಡ, ಮರ, ಬಳ್ಳಿಗಳು. ಒಂದು
ಗಿಡ ಬಾಡಿದರೆ ಇನ್ನೊಂದು ಅದನ್ನು ತುಂಬಿಸುತ್ತದೆ. ಹಾಗಾಗಿ ಕಾಡಿನಲ್ಲಿ ಆಗಾಗ ಮುನ್ನವೇ ತುಂಬಿಸುತ್ತಾ
ಹೋಗುವುದು ಬುದ್ದಿವಂತಿಕೆ. ಆಗಾಗ ಹೆಗ್ಗಣರಾಯ ಬಂದು ಬೇರನ್ನೇ ಕತ್ತರಿಸಿದಾಗ ಅಮೂಲ್ಯವಾದ ಒಂದು ಗಿಡವೋ
ಮರವೋ ಕೈ ತಪ್ಪುತ್ತದೆ. ಹಾಗಾಗಿ, ಆಕಸ್ಮಿಕಗಳಿಗೆ ಅಳುವ ಮುನ್ನವೇ ಅವನ್ನು ಮೀರಿ ಹೊಸತನ್ನು ನೆಡುತ್ತಲೇ
ಹೋಗಬೇಕು. ಪ್ರತಿ ಆಕಸ್ಮಕದ ನಂತರ ಅದೇ ಸ್ಥಾನದಲ್ಲಿ ಇನ್ನೊಂದು ಅರಳಲು ಸಿದ್ಧವಾಗಬೇಕು.
ಕಳೆದ ಮೂರು ತಿಂಗಳಲ್ಲಿ
ಕರೋನಾ ಮಹಿಮೆಯಿಂದಾಗಿ ಈ ರೀತಿಯ ಹೊಸತನ್ನು ನೆಡುವುದು ಸಾಧ್ಯವಾಗಿಲ್ಲ. ಆದರೂ ಇರುವ ಗಿಡಗಳನ್ನೇ ಮರಿಗಳನ್ನಾಗಿ
ಮಾಡಿ ನೆಡುತ್ತಾ ಹೋಗಿದ್ದೇನೆ. ಈ ರೀತಿಯಾಗಿ, ವೈವಿಧ್ಯಗಳಿಗೆ ತಾತ್ಕಾಲಿಕ ಹಿನ್ನಡೆಯಾದರೂ ಹಸಿರಿನ
ಹೆಚ್ಚಳಕ್ಕೆ ತೊಂದರೆ ಇಲ್ಲ.
ಗಿಡಗಳನ್ನು ನೆಡುವಾಗ
ನೆನಪಿಡಲ್ಲಿರಬೇಕಾದ ಅಂಶ, ನೆಡುವಿಕೆಗೂ ಫಲಿತಾಂಶಕ್ಕೂ ಇರುವ ಸಮಯದ ವ್ಯತ್ಯಯ ಬೇರೆ ಬೇರೆ ಗಿಡಮರಗಳಿಗೆ
ಬೇರೆಬೇರೆಯಾಗಿರುತ್ತದೆ. ಮೂರು ತಿಂಗಳಿಂದ ಹಿಡಿದು ಏಳು ವರ್ಷಗಳ ತನಕ ಕಾಯುವ ಪ್ರಮೇಯ ಇರುತ್ತದೆ.
ಹಾಗಾಗಿಯೇ, ಈ ಕರೋನಾ ಸಮಯದಲ್ಲೂ ಬಹಳ ಹಿಂದೆ ನೆಟ್ಟ ಗಿಡಗಳು ಅರಳಿ ಹೂವಾಗಿ ಹಾಯಾದವು.
ಪಾರಂಪಳ್ಳಿ ಪಡುಕೆರೆಯಲ್ಲಿ ಕೃಷಿಕ ಕುಟುಂಬದಲ್ಲಿದ್ದ ಕಾರಣ, ಗಿಡಮರಗಳ ಹಿಂದೆ ಉಪಯೋಗದ ಮಾಪನವೇ ಮುಖ್ಯ. ದೇವರಿಗೆ, ಮುಡಿಯಲು, ತಿನ್ನಲು ಹೀಗೆ ಈ ಆದಾರಗಳಲ್ಲಿ ಗಿಡಮರಗಳಿದ್ದವು. ಇದನ್ನು ಮೀರಿ ವೈವಿಧ್ಯಗಳಿಗೆ ನಾವು ತೋಡುಗಳ ಅಕ್ಕ ಪಕ್ಕ ಹುಡುಕಬೇಕಾಗಿತ್ತು.
ಕತ್ತರಿ ದಾಸವಾಳ
ನಮ್ಮ ಮನೆಯಲ್ಲಿ ಹುಲುಸಾಗಿ ಬೆಳೆದು ಮರವಾಗಿ ೫೦ರ ತನಕದ ಹೂವುಗಳನ್ನು ಒಂದೇ ಮರವು ಕೊಡಬಲ್ಲದ್ದಾಗಿದ್ದು
ದೇವರ ಪೂಜೆಗೆ ಅದೊಂದೇ ಸಾಕಾಗುತ್ತಿತ್ತು. ಅಪ್ಪ ಆ ನಂತರ ಮಾಡುವ ಪೂಜೆಗೆ ಹೂ ಕೊಯ್ಯುವ ಕೈಂಕರ್ಯ ನಮ್ಮದಿತ್ತು.
ಆದರೆ ಅಮ್ಮ, ತನ್ನ ಪೂಜೆಗೆ ತಾನೇ ಹೂವು ಕೊಯ್ಯತ್ತಿದ್ದಳು. ಸ್ನಾನ ಮಾಡಿ ಮಿಂದ ಥಂಡಿ ಬಟ್ಟೆಯಲ್ಲೇ ಹೂವು
ಕೊಯ್ದು ದೇವರಿಗಿಟ್ಟು ತುಳಸಿಗಿಟ್ಟು ಕೈಮಗಿದ ನಂತರವೇ ನಮ್ಮ ಹೂವು ಕೊಯ್ಯುವ ಸಮಯವಿರುತ್ತಿತ್ತು.
ಅಮ್ಮ ತನಗೆ ಬೇಕಾದಷ್ಟೇ ಕೊಯ್ದು ಹೋದ ಕಾರಣ ನಮಗೆ ಕೊಯ್ಯಲು ಸಾಕಷ್ಟು ಹೂವುಗಳು ಇರುತ್ತಿದ್ದವು, ಮತ್ತೆ
ಉಳಿಯುತ್ತಿದ್ದವು. ಹಾಗಾಗಿ, ಈ ಕತ್ತರಿ ದಾಸವಾಳದ ಕೆಳ ತುದಿಯನ್ನು ಹೀರಿ, ಸಿಹಿ ಮಕರಂದವನ್ನು ಕುಡಿದು, ಹೂವನ್ನು
ಬಿಸುಟು ನಮ್ಮ ಹೊಟ್ಟೆ ಪೂಜೆಯು ದೇವರ ಪೂಜೆಗಿಂತ ಮೊದಲೇ ಸಾಗುತ್ತಿತ್ತು. ಬೇಕಷ್ಟು ಹೂವುಗಳು ಇರುವ
ಕಾರಣ ಕೆಂಪು ಮೆಣಸಿಕಾಯಿಯ ಹಾಗೆ ಕಾಣುವ ಮಿಟ್ಟೆ ದಾಸವಾಳವು ದೇವರ ಪೂಜೆಗಿಲ್ಲದೇ ನಮ್ಮ ಹೊಟ್ಟೆಯನ್ನು
ಸೇರುವ ಮಕರದಕ್ಕಾಗಿಯೇ ಮೀಸಲಿದ್ದವು.
ವರ್ಷದಲ್ಲಿ ಒಂದು
ದಿನ ಮಾತ್ರ ನಾವು ನಮ್ಮ ತೋಟದ ಎಲ್ಲಾ ಹೂವುಗಳನ್ನು ಕಿತ್ತು ತರುತ್ತಿದ್ದೆವು. ಈ ಕತ್ತರಿ ದಾಸವಾಳದ
ಮರವನ್ನು ಹತ್ತಿ, ಕೊಂಬೆಗಳನ್ನು ಬಗ್ಗಿಸಿ, ಒಂದೂ ಹೂವು ಉಳಿಯದಂತೆ ಮಾಡುತ್ತಿದ್ದೆವು. ದೀಪಾವಳಿ ನಂತರದ
ಗೋಪೂಜೆ ದಿನ ದನಗಳನ್ನು ಮೀಯಿಸಿ, ಒಂದು ಸಣ್ಣ ತಟ್ಟೆಯನ್ನು ನೀರಾಗಿರುವ ಗಂಧ ವಿಭೂತಿಗಳಲ್ಲಿ ಅದ್ದಿ ದನಗಳ ಮೈಯುದ್ದಕ್ಕೂ ಉರುಟುರುಟಾದ
ಹಚ್ಚೆಗಳನ್ನು ಹಾಕುತ್ತಿದ್ದೆವು. ಹೂಹಾರಗಳನ್ನು ಮಾಡಿ ಇಟ್ಟು ಪೂಜೆಯ ಸಮಯದಲ್ಲಿ ಮಾತ್ರ ಅವುಗಳ ಕೊರಳಿಗೆ
ಹಾಕುತ್ತಿದ್ದೆವು, ಕಾರಣ ಪೂಜೆ ಮುಗಿಯುವ ಮುನ್ನವೇ ಈ ಹೂಹಾರಗಳು ಅವುಗಳ ಬಾಯಿಯಲ್ಲಿರುತ್ತಿದ್ದವು.
ಗೋಪೂಜೆಯಲ್ಲಿ ಕತ್ತರಿ ದಾಸವಾಳದ ಕರಾಮತ್ತು ಸಾಕಷ್ಟಿತ್ತು.
ಬದುಕಿನ ಎಳವೆಯಲ್ಲೇ
ಸಮೃದ್ಧಿಯ ಪಾಠವನ್ನು ಕಲಿಸಿದ್ದು ಈ ಕತ್ತರಿ ದಾಸವಾಳ. ನಮ್ಮ ಇಂದಿನ ಮನೆಯ ಮೇಲಿನ ಈ ಕಾಡಿನಲ್ಲಿ ಅದು
ಇಲ್ಲದಿರೆ ಹೇಗೆ. ಆದರೆ, ನಾನು ಲಾಲ್ಭಾಗಿನ ಪೂರ್ವದ ಸಿದ್ಧಾಪುರದ ಮೂಲೆಮೂಲೆಯ ನರ್ಸರಿಗಳಿಗೆ ಹೋದಾಗ,
ದಾಸವಾಳಗಳ ಗಿಡ ಕಡಿಮೆ ಬೆಲೆಗೇ ಸಿಕ್ಕರೂ (ರೂ ೨೦-೪೦), ನಾನು ಕೊಳ್ಳುವ ದಾಸವಾಳ ಯಾವ ಹೂವು ಕೊಡುತ್ತದೆ
ಎಂಬುದು ನರ್ಸರಿಯವನೂ ಖಚಿತವಾಗಿ ಹೇಳಲಾರ. ಹಾಗಾಗಿ ಒಂದು ಸೋಡ್ತಿಯಲ್ಲೇ ಸ್ವಲ್ಪ ಜಾಸ್ತಿನೇ ಗಿಡಗಳನ್ನು
ಕಳೆದ ವರ್ಷ ತಂದು ಹಾಕಿದೆ.
ಈ ಮೇನಲ್ಲಿ ಕತ್ತರಿ
ದಾಸವಾಳ ನಮ್ಮ ಕಾಡಿನಲ್ಲಿ ಅರಳಿದೆ, ಕಾಡಿನ ಸೌಂದರ್ಯಕ್ಕಿಂತ ನನ್ನ ಅಂತರಗಂಗದ ಸೌಂದರ್ಯವನ್ನು ಮತ್ತಷ್ಟು
ಬೆಳಗಿದೆ. ಕಾಡಿನ ಮೂಲೆಮೂಲೆಗಳಲ್ಲಿ ಭೂತ-ವರ್ತಮಾನ-ಹಾಗೂ
ಭವಿಷ್ಯಗಳಿಗೆ ಸಾಂಗತ್ಯ ನೀಡುವ ಇನ್ನೂ ಸಾವಿರಾರು ಕಥೆಗಳನ್ನು ಪುಟ್ಟಿಸಲು ಪುಷ್ಟಿ ಕೊಟ್ಟಿದೆ.
ಈ ಕತ್ತರಿ ದಾಸವಾಳವು ನಮ್ಶ್ರಮ ಆಶ್ರಮ ಗಾರ್ಡನಿನ
ಕಾಡಿನಲ್ಲಿ ಇನ್ನೂ ಹೊಸ ಹೊಸ ಕಾವ್ಯಗಳನ್ನು ಹುಟ್ಟಿಸುತ್ತಾ ಹೋಗುವತ್ತ ನನ್ನ ತಲೆಯನ್ನು ಮತ್ತಷ್ಟು ಕೆಡಿಸಿದೆ. ಕರೋನಾ
ದಿಗ್ಬಂಧನ ಮುಗಿಯುತ್ತಲಿದೆ, ಸಿದ್ಧಾಪುರದ ಒಂಟಿ ನರ್ಸರಿಗಳು ಕೂಗಿ ಕರೆಯುತ್ತಿವೆ. ಹೆಚ್ಚು ಓಡದೇ,
ಸರಿಯಾದ ಸ್ನಾನವಿಲ್ಲದೇ ಕಾರು ಸೊರಗಿ ಅಳುತ್ತಿದೆ, ಕಾರಿನ ಹಿಂದಿನ ಢಿಕ್ಕಿ ಮಣ್ಣಿನ ವಾಸನೆ ಇಲ್ಲದೇ ಖಾಲಿಖಾಲಿಯಾಗಿ ಖಿನ್ನತೆಯಲ್ಲಿದೆ.
ಇವೆಲ್ಲವನ್ನೂ ಮೀರಿ
ಕತ್ತರಿ ದಾಸವಾಳವು ಗಾಳಿಗೆ ಬಾಗುತ್ತಾ, ಕುಣಿಯುತ್ತಾ
ನಮ್ಮ ಕಾಡಿನ ಎಂದಿನ ನಿತ್ಯೋತ್ಸವದಲ್ಲಿ ಹೊಸ ನೃತ್ಯಪ್ರಕಾರವನ್ನೇ ಸೇರಿಸಿದೆ.
ನಮ್ಮ ವೈಯಕ್ತಿಕ ಬದುಕಿನಲ್ಲಿ ಅಳಿದು ಮಾಯವಾಗುವ ಮುನ್ನ ಈ ಕತ್ತರಿ ದಾಸವಾಳದಷ್ಟಾದರೂ ಅರಳಿ ಹೊರಳಿ ನಲಿದು ಸುತ್ತಲಿನ ನೋವು ಅಳಿಸಿ ಹೋಗುವುದು ನೋಡದೇ ಇರುವುದು ಸಾಧ್ಯವೇ?
ಲೇಖನ ಸೊಗಸಾಗಿದೆ. ನಾವಿದನ್ನು ಗಂಟೆ ದಾಸವಾಳವೆನ್ನುತ್ತಿದ್ದೆವು.
ReplyDeleteಕತ್ತರಿ ದಾಸವಾಳದಷ್ಟೇ ಸುಂದರ ಲೇಖನ, ಸಿದ್ದಾಪುರದಲ್ಲಿ, ಅಕಸ್ಮಾತ್ ದಾಸವಾಳದ ಗಿಡಗಳ ಮದ್ಯ ಸಿಕ್ಕ ಗಿಡವಾ? ಅಥವಾ ಇಲ್ಲಿ ಬೆಂಗಳೂರಲ್ಲಿ ಅದಕ್ಕೂಂದು ಬೇರೆ ಹೆಸರಿದೆಯಾ?
ReplyDelete