Saturday, May 30, 2020

ನಮ್ಮ ಕಾಡಿನ ಮೂಲೆಯಲ್ಲಿ ಕಾವ್ಯ ಬರೆಸುತ್ತಿರುವ ಕತ್ತರಿ ದಾಸವಾಳ!



ಮನೆಯ ಮೇಲೆ ಕಾಡು ಮಾಡಿದಾಗ, ಈ ಕಾಡು ಬರೇ ಹಸಿರಿಗೇ ಮಾತ್ರ ಇರಬೇಕಾಗಿಲ್ಲ. ಕಾಡಿನ ಒಂದೊಂದು ಮೂಲೆಯಲ್ಲೂ ಕಾವ್ಯವನ್ನು ಅರಳಿಸಲು ಸಾಧ್ಯವಿದೆ. 

ಕಾಡಿನ ಒಂದು ವಿಶೇಷವೆಂದರೆ ದಟ್ಟವಾಗಿ ಇರುವ ಗಿಡ, ಮರ, ಬಳ್ಳಿಗಳು. ಒಂದು ಗಿಡ ಬಾಡಿದರೆ ಇನ್ನೊಂದು ಅದನ್ನು ತುಂಬಿಸುತ್ತದೆ. ಹಾಗಾಗಿ ಕಾಡಿನಲ್ಲಿ ಆಗಾಗ ಮುನ್ನವೇ ತುಂಬಿಸುತ್ತಾ ಹೋಗುವುದು ಬುದ್ದಿವಂತಿಕೆ. ಆಗಾಗ ಹೆಗ್ಗಣರಾಯ ಬಂದು ಬೇರನ್ನೇ ಕತ್ತರಿಸಿದಾಗ ಅಮೂಲ್ಯವಾದ ಒಂದು ಗಿಡವೋ ಮರವೋ ಕೈ ತಪ್ಪುತ್ತದೆ. ಹಾಗಾಗಿ, ಆಕಸ್ಮಿಕಗಳಿಗೆ ಅಳುವ ಮುನ್ನವೇ ಅವನ್ನು ಮೀರಿ ಹೊಸತನ್ನು ನೆಡುತ್ತಲೇ ಹೋಗಬೇಕು. ಪ್ರತಿ ಆಕಸ್ಮಕದ ನಂತರ ಅದೇ ಸ್ಥಾನದಲ್ಲಿ ಇನ್ನೊಂದು ಅರಳಲು ಸಿದ್ಧವಾಗಬೇಕು.

ಕಳೆದ ಮೂರು ತಿಂಗಳಲ್ಲಿ ಕರೋನಾ ಮಹಿಮೆಯಿಂದಾಗಿ ಈ ರೀತಿಯ ಹೊಸತನ್ನು ನೆಡುವುದು ಸಾಧ್ಯವಾಗಿಲ್ಲ. ಆದರೂ ಇರುವ ಗಿಡಗಳನ್ನೇ ಮರಿಗಳನ್ನಾಗಿ ಮಾಡಿ ನೆಡುತ್ತಾ ಹೋಗಿದ್ದೇನೆ. ಈ ರೀತಿಯಾಗಿ, ವೈವಿಧ್ಯಗಳಿಗೆ ತಾತ್ಕಾಲಿಕ ಹಿನ್ನಡೆಯಾದರೂ ಹಸಿರಿನ ಹೆಚ್ಚಳಕ್ಕೆ ತೊಂದರೆ ಇಲ್ಲ.

ಗಿಡಗಳನ್ನು ನೆಡುವಾಗ ನೆನಪಿಡಲ್ಲಿರಬೇಕಾದ ಅಂಶ, ನೆಡುವಿಕೆಗೂ ಫಲಿತಾಂಶಕ್ಕೂ ಇರುವ ಸಮಯದ ವ್ಯತ್ಯಯ ಬೇರೆ ಬೇರೆ ಗಿಡಮರಗಳಿಗೆ ಬೇರೆಬೇರೆಯಾಗಿರುತ್ತದೆ. ಮೂರು ತಿಂಗಳಿಂದ ಹಿಡಿದು ಏಳು ವರ್ಷಗಳ ತನಕ ಕಾಯುವ ಪ್ರಮೇಯ ಇರುತ್ತದೆ. ಹಾಗಾಗಿಯೇ, ಈ ಕರೋನಾ ಸಮಯದಲ್ಲೂ ಬಹಳ ಹಿಂದೆ ನೆಟ್ಟ ಗಿಡಗಳು ಅರಳಿ ಹೂವಾಗಿ ಹಾಯಾದವು.

ಪಾರಂಪಳ್ಳಿ ಪಡುಕೆರೆಯಲ್ಲಿ ಕೃಷಿಕ ಕುಟುಂಬದಲ್ಲಿದ್ದ ಕಾರಣ, ಗಿಡಮರಗಳ ಹಿಂದೆ ಉಪಯೋಗದ ಮಾಪನವೇ ಮುಖ್ಯ. ದೇವರಿಗೆ, ಮುಡಿಯಲು, ತಿನ್ನಲು ಹೀಗೆ ಈ ಆದಾರಗಳಲ್ಲಿ ಗಿಡಮರಗಳಿದ್ದವು. ಇದನ್ನು ಮೀರಿ ವೈವಿಧ್ಯಗಳಿಗೆ ನಾವು ತೋಡುಗಳ ಅಕ್ಕ ಪಕ್ಕ ಹುಡುಕಬೇಕಾಗಿತ್ತು.

ಕತ್ತರಿ ದಾಸವಾಳ ನಮ್ಮ ಮನೆಯಲ್ಲಿ ಹುಲುಸಾಗಿ ಬೆಳೆದು ಮರವಾಗಿ ೫೦ರ ತನಕದ ಹೂವುಗಳನ್ನು ಒಂದೇ ಮರವು ಕೊಡಬಲ್ಲದ್ದಾಗಿದ್ದು ದೇವರ ಪೂಜೆಗೆ ಅದೊಂದೇ ಸಾಕಾಗುತ್ತಿತ್ತು. ಅಪ್ಪ ಆ ನಂತರ ಮಾಡುವ ಪೂಜೆಗೆ ಹೂ ಕೊಯ್ಯುವ ಕೈಂಕರ್ಯ ನಮ್ಮದಿತ್ತು. ಆದರೆ ಅಮ್ಮ, ತನ್ನ ಪೂಜೆಗೆ ತಾನೇ ಹೂವು ಕೊಯ್ಯತ್ತಿದ್ದಳು. ಸ್ನಾನ ಮಾಡಿ ಮಿಂದ ಥಂಡಿ ಬಟ್ಟೆಯಲ್ಲೇ ಹೂವು ಕೊಯ್ದು ದೇವರಿಗಿಟ್ಟು ತುಳಸಿಗಿಟ್ಟು ಕೈಮಗಿದ ನಂತರವೇ ನಮ್ಮ ಹೂವು ಕೊಯ್ಯುವ ಸಮಯವಿರುತ್ತಿತ್ತು. ಅಮ್ಮ ತನಗೆ ಬೇಕಾದಷ್ಟೇ ಕೊಯ್ದು ಹೋದ ಕಾರಣ ನಮಗೆ ಕೊಯ್ಯಲು ಸಾಕಷ್ಟು ಹೂವುಗಳು ಇರುತ್ತಿದ್ದವು, ಮತ್ತೆ ಉಳಿಯುತ್ತಿದ್ದವು. ಹಾಗಾಗಿ, ಈ ಕತ್ತರಿ ದಾಸವಾಳದ ಕೆಳ ತುದಿಯನ್ನು ಹೀರಿ, ಸಿಹಿ ಮಕರಂದವನ್ನು ಕುಡಿದು, ಹೂವನ್ನು ಬಿಸುಟು ನಮ್ಮ ಹೊಟ್ಟೆ ಪೂಜೆಯು ದೇವರ ಪೂಜೆಗಿಂತ ಮೊದಲೇ ಸಾಗುತ್ತಿತ್ತು. ಬೇಕಷ್ಟು ಹೂವುಗಳು ಇರುವ ಕಾರಣ ಕೆಂಪು ಮೆಣಸಿಕಾಯಿಯ ಹಾಗೆ ಕಾಣುವ ಮಿಟ್ಟೆ ದಾಸವಾಳವು ದೇವರ ಪೂಜೆಗಿಲ್ಲದೇ ನಮ್ಮ ಹೊಟ್ಟೆಯನ್ನು ಸೇರುವ ಮಕರದಕ್ಕಾಗಿಯೇ ಮೀಸಲಿದ್ದವು.

ವರ್ಷದಲ್ಲಿ ಒಂದು ದಿನ ಮಾತ್ರ ನಾವು ನಮ್ಮ ತೋಟದ ಎಲ್ಲಾ ಹೂವುಗಳನ್ನು ಕಿತ್ತು ತರುತ್ತಿದ್ದೆವು. ಈ ಕತ್ತರಿ ದಾಸವಾಳದ ಮರವನ್ನು ಹತ್ತಿ, ಕೊಂಬೆಗಳನ್ನು ಬಗ್ಗಿಸಿ, ಒಂದೂ ಹೂವು ಉಳಿಯದಂತೆ ಮಾಡುತ್ತಿದ್ದೆವು. ದೀಪಾವಳಿ ನಂತರದ ಗೋಪೂಜೆ ದಿನ ದನಗಳನ್ನು ಮೀಯಿಸಿ, ಒಂದು ಸಣ್ಣ ತಟ್ಟೆಯನ್ನು ನೀರಾಗಿರುವ  ಗಂಧ ವಿಭೂತಿಗಳಲ್ಲಿ ಅದ್ದಿ ದನಗಳ ಮೈಯುದ್ದಕ್ಕೂ ಉರುಟುರುಟಾದ ಹಚ್ಚೆಗಳನ್ನು ಹಾಕುತ್ತಿದ್ದೆವು. ಹೂಹಾರಗಳನ್ನು ಮಾಡಿ ಇಟ್ಟು ಪೂಜೆಯ ಸಮಯದಲ್ಲಿ ಮಾತ್ರ ಅವುಗಳ ಕೊರಳಿಗೆ ಹಾಕುತ್ತಿದ್ದೆವು, ಕಾರಣ ಪೂಜೆ ಮುಗಿಯುವ ಮುನ್ನವೇ ಈ ಹೂಹಾರಗಳು ಅವುಗಳ ಬಾಯಿಯಲ್ಲಿರುತ್ತಿದ್ದವು. ಗೋಪೂಜೆಯಲ್ಲಿ ಕತ್ತರಿ ದಾಸವಾಳದ ಕರಾಮತ್ತು ಸಾಕಷ್ಟಿತ್ತು.

ಬದುಕಿನ ಎಳವೆಯಲ್ಲೇ ಸಮೃದ್ಧಿಯ ಪಾಠವನ್ನು ಕಲಿಸಿದ್ದು ಈ ಕತ್ತರಿ ದಾಸವಾಳ. ನಮ್ಮ ಇಂದಿನ ಮನೆಯ ಮೇಲಿನ ಈ ಕಾಡಿನಲ್ಲಿ ಅದು ಇಲ್ಲದಿರೆ ಹೇಗೆ. ಆದರೆ, ನಾನು ಲಾಲ್ಭಾಗಿನ ಪೂರ್ವದ ಸಿದ್ಧಾಪುರದ ಮೂಲೆಮೂಲೆಯ ನರ್ಸರಿಗಳಿಗೆ ಹೋದಾಗ, ದಾಸವಾಳಗಳ ಗಿಡ ಕಡಿಮೆ ಬೆಲೆಗೇ ಸಿಕ್ಕರೂ (ರೂ ೨೦-೪೦), ನಾನು ಕೊಳ್ಳುವ ದಾಸವಾಳ ಯಾವ ಹೂವು ಕೊಡುತ್ತದೆ ಎಂಬುದು ನರ್ಸರಿಯವನೂ ಖಚಿತವಾಗಿ ಹೇಳಲಾರ. ಹಾಗಾಗಿ ಒಂದು ಸೋಡ್ತಿಯಲ್ಲೇ ಸ್ವಲ್ಪ ಜಾಸ್ತಿನೇ ಗಿಡಗಳನ್ನು ಕಳೆದ ವರ್ಷ ತಂದು ಹಾಕಿದೆ.

ಈ ಮೇನಲ್ಲಿ ಕತ್ತರಿ ದಾಸವಾಳ ನಮ್ಮ ಕಾಡಿನಲ್ಲಿ ಅರಳಿದೆ, ಕಾಡಿನ ಸೌಂದರ್ಯಕ್ಕಿಂತ ನನ್ನ ಅಂತರಗಂಗದ ಸೌಂದರ್ಯವನ್ನು ಮತ್ತಷ್ಟು ಬೆಳಗಿದೆ. ಕಾಡಿನ ಮೂಲೆಮೂಲೆಗಳಲ್ಲಿ  ಭೂತ-ವರ್ತಮಾನ-ಹಾಗೂ ಭವಿಷ್ಯಗಳಿಗೆ ಸಾಂಗತ್ಯ ನೀಡುವ ಇನ್ನೂ ಸಾವಿರಾರು ಕಥೆಗಳನ್ನು ಪುಟ್ಟಿಸಲು ಪುಷ್ಟಿ ಕೊಟ್ಟಿದೆ.

ಈ ಕತ್ತರಿ ದಾಸವಾಳವು ನಮ್ಶ್ರಮ ಆಶ್ರಮ ಗಾರ್ಡನಿನ ಕಾಡಿನಲ್ಲಿ ಇನ್ನೂ ಹೊಸ ಹೊಸ ಕಾವ್ಯಗಳನ್ನು ಹುಟ್ಟಿಸುತ್ತಾ ಹೋಗುವತ್ತ ನನ್ನ ತಲೆಯನ್ನು ಮತ್ತಷ್ಟು ಕೆಡಿಸಿದೆ. ಕರೋನಾ ದಿಗ್ಬಂಧನ ಮುಗಿಯುತ್ತಲಿದೆ, ಸಿದ್ಧಾಪುರದ ಒಂಟಿ ನರ್ಸರಿಗಳು ಕೂಗಿ ಕರೆಯುತ್ತಿವೆ. ಹೆಚ್ಚು ಓಡದೇ, ಸರಿಯಾದ ಸ್ನಾನವಿಲ್ಲದೇ ಕಾರು ಸೊರಗಿ ಅಳುತ್ತಿದೆ, ಕಾರಿನ ಹಿಂದಿನ ಢಿಕ್ಕಿ ಮಣ್ಣಿನ ವಾಸನೆ ಇಲ್ಲದೇ  ಖಾಲಿಖಾಲಿಯಾಗಿ ಖಿನ್ನತೆಯಲ್ಲಿದೆ.

ಇವೆಲ್ಲವನ್ನೂ ಮೀರಿ ಕತ್ತರಿ ದಾಸವಾಳವು ಗಾಳಿಗೆ ಬಾಗುತ್ತಾ, ಕುಣಿಯುತ್ತಾ  ನಮ್ಮ ಕಾಡಿನ ಎಂದಿನ ನಿತ್ಯೋತ್ಸವದಲ್ಲಿ ಹೊಸ ನೃತ್ಯಪ್ರಕಾರವನ್ನೇ ಸೇರಿಸಿದೆ.

ನಮ್ಮ ವೈಯಕ್ತಿಕ ಬದುಕಿನಲ್ಲಿ ಅಳಿದು ಮಾಯವಾಗುವ ಮುನ್ನ ಈ ಕತ್ತರಿ ದಾಸವಾಳದಷ್ಟಾದರೂ ಅರಳಿ ಹೊರಳಿ ನಲಿದು ಸುತ್ತಲಿನ ನೋವು ಅಳಿಸಿ ಹೋಗುವುದು ನೋಡದೇ ಇರುವುದು ಸಾಧ್ಯವೇ?  

Monday, January 13, 2020

ಬೆಂಗಳೂರು ಬೀದಿ ನಾಯಿಗಳ ಬದುಕು – ಭಾಗ ೨




ಬೆಂಗಳೂರಿನಲ್ಲಿ ಒಂದು ಅಂದಾಜಿನ ಪ್ರಕಾರ ಇಂದು ಸುಮಾರು ೫ ಲಕ್ಷ ಬೀದಿ ನಾಯಿಗಳಿವೆ, ಅಂದರೆ ಸುಮಾರು ೨೦ ಜನರಿಗೆ ಒಂದು ಬೀದಿ ನಾಯಿ ಇದೆ. ನಮ್ಮ ಮನೆಯ  ರಸ್ತೆಯನ್ನು ಉದಾಹರಣೆಗೆ ತೆಗೆದುಕೊಂಡರೆ, ಸುಮಾರು ೪೦೦ ಮೀಟರ್‌ ಉದ್ದವಿದೆ, ಸುಮಾರು ೬೦ ಮನೆಗಳಿವೆ, ಹೆಚ್ಚಿನವು ಅಪಾರ್ಟ್ಮೆಂಟುಗಳಾಗಿವೆ, ಸರಾಸರಿ ೧೦-೧೫ ಮಂದಿಗಳಂತೆ ೬೦೦-೯೦೦ ಜನರಿದ್ದಾರೆ, ಸರಾಸರಿಯ ಪ್ರಕಾರ ಇವರ ಸುತ್ತ ೩೦-೪೫ ಬೀದಿ ನಾಯಿಗಳರ ಬಹುದಾಗಿದೆ, ಆದರೆ ನಮ್ಮಲ್ಲಿ ೧೦-೨೦ ಬೀದಿ ನಾಯಿಗಳ ಓಡಾಟ ಯಾ ಮಲಗಾಟ ಇದ್ದು ಸರಾಸರಿಗಿಂತ ಕಡಿಮೆಯೇ ಇದೆ, ಯಾಕೆ ಇದು ಹೀಗೆ?

ನಮ್ಮ ಬೆಂಗಳೂರನ್ನು ತೆಗೆದುಕೊಂಡರೆ, ಅಲ್ಲಿನ ಬಡಾವಣೆಗಳಲ್ಲಿ ಬೇರೆ ಬೇರೆ ವಿಧಗಳಿವೆ. ವಿಧಾನಸೌಧವನ್ನು ಕೇಂದ್ರವನ್ನಾಗಿ ಇಟ್ಟುಕೊಂಡರೆ, ಸುಮಾರು ೧೦ ಕಿಲೋಮೀಟರುಗಳ ತ್ರಿಜ್ಯದಲ್ಲಿ ಕೇಂದ್ರ ವ್ಯವಹಾರ ವಲಯವಿದೆ. ಆ ನಂತರ ಇನ್ನೊಂದು ಹತ್ತು ಕಿಲೋಮೀಟರುಗಳ ತನಕ ಜನರ ವಾಸ್ತವ್ಯವೇ ಮುಖ್ಯವಿದ್ದರೂ ಅಲ್ಲಿ ವ್ಯವಹಾರ ಕೇಂದ್ರಗಳು ಬೆಳೆಯುತ್ತಿವೆ. ಇಪ್ಪತ್ತು ಕಿಲೋಮೀಟರುಗಳ ತ್ರಿಜ್ಯದ ನಂತರ ನಗರದ ಹೊರವಲಯಗಳಿವೆ, ಇಲ್ಲಿ ವಾಸ್ತವ್ಯ ಹಾಗೂ ವ್ಯವಹಾರಗಳು ಏಕ ಕಾಲದಲ್ಲಿ ಬೆಳೆಯುತ್ತಿವೆ. ಅಪವಾದವೆಂಬಂತೆ ಅಲ್ಲಲ್ಲಿ ನಗರದ ಸಣ್ಣ ಕೇಂದ್ರಗಳು ಸ್ಥಾಪಿತವಾಗಿದ್ದು, ಮೇಲೆ ಹೇಳಿರುವ ಹರಡುವಿಕೆಯಲ್ಲಿ ಸ್ವಲ್ಪ ವ್ಯತ್ಯಯ ಬರುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ, ಕೇಂದ್ರ ವ್ಯವಹಾರ ವಲಯಗಳಲ್ಲಿ ಬೀದಿನಾಯಿಗಳು ಕಡಿಮೆ ಇರುತ್ತವೆ, ಮಧ್ಯದ ವಾಸ್ತವ್ಯ ವಲಯಗಳಲ್ಲಿ ಸ್ವಲ್ಪ ಹೆಚ್ಚು, ಹೊರವಲಯದಲ್ಲಿ ಅತೀ ಹೆಚ್ಚು. ಇದಕ್ಕೆ ಮತ್ತೆ ಅಪವಾದಗಳಲ್ಲಿರುತ್ತವೆ. ಉದಾಹರಣೆಗೆ ಲಾಲ್‌ ಬಾಗ್‌ ಕೇಂದ್ರ ವ್ಯವಹಾರ ವಲಯದ ತುದಿಯಲ್ಲಿ ಇದ್ದರೂ ಕೂಡಾ ಇಲ್ಲಿನ ಬೀದಿನಾಯಿಗಳ ಸಂಖ್ಯೆ ನಗರದ ಹೊರವಲಯದ ಸರಾಸರಿಯಲ್ಲಿ ಇವೆ, ಇದಕ್ಕೆ ಕಾರಣ ಇಲ್ಲಿ ಮುಕ್ತವಾಗಿ ಓಡಾಡಿಕೊಂಡಿರಲು ಅವಕಾಶ ಮತ್ತು ಬರುವ ಪ್ರವಾಸಿಗರು ಹಾಗೂ ಬೆಳಗಿನ ವ್ಯಾಯಾಮ ನಡೆಗೆ ಬರುವವರ ಉದಾರತೆಯಲ್ಲಿ ಸಿಗುವ ಆಹಾರ ವಸ್ತುಗಳು. ನಗರ ಕೇಂದ್ರದಿಂದ ತ್ರಿಜ್ಯ ಹೆಚ್ಚಿದಂತೆ ಮಾನವ ವಾಸ್ತವ್ಯದ ನೆರವು ಹೆಚ್ಚುವುದರಿಂದ, ನಾಗರಿಕ ಕಸ ಎತ್ತುವ ವ್ಯವಸ್ಥೆಯಲ್ಲಿ ಅವ್ಯವಸ್ಥೆ ಹೆಚ್ಚುವುದರಿಂದ ನಾಯಿಗಳ ಸರಾಸರಿಯೂ ಹೆಚ್ಚುತ್ತಾ ಹೋಗುತ್ತದೆ.

ನಮ್ಮ  ಬಡಾವಣೆಯು ಕೇಂದ್ರ ವ್ಯವಹಾರ ವಲಯಕ್ಕೆ ತಾಗಿಕೊಂಡಿರುವ ವಾಸ್ತವ್ಯ ವಲಯವಾಗಿದ್ದರೂ ಮೊದಮೊದಲು ಇಲ್ಲಿನ ವ್ಯವಸ್ಥೆ ಹೊರವಲಯದಂತೇ ಇತ್ತು. ಸುಮಾರು ೧೯೯೯ರ ನಂತರವೇ ನಮ್ಮ ವಾಸ್ತವ್ಯ ಜಾಗಗಳು ರೆವಿನ್ಯೂ ಖಾತೆಯಿಂದ ನಗರಪಾಲಿಕೆ ಖಾತೆಗೆ ಮಾರ್ಪಾಟಾದವು, ಅಲ್ಲಿನ ತನಕ ನಮ್ಮ ಬಡಾವಣೆ ಮಾಡುವಾಗ ಅಂದರೆ ಅದಕ್ಕಿಂತ ಸುಮಾರು ೧೫-೨೦ ವರ್ಷಗಳ ಹಿಂದಿನ ಕೆಂಪು ಮಣ್ಣಿನ ರಸ್ತೆಗಳೇ ಇದ್ದುವು, ದಿನವಿಡೀ ಇವುಗಳ ಮೇಲಿನ ವಾಹನ ಓಡಾಟಗಳಲ್ಲಿ ಹೊರಡುವ ಕೆಂಪು ಧೂಳಿಯನ್ನು ಮೂಗು ಬಾಯಿಯ ಮೂಲಕ ಸೇವಿಸಿ ನಾವು ಗಟ್ಟಿಯಾಗುತ್ತಲೇ ಬಂದಿದ್ದೆವು. ನಮಗೆ ಡಾಂಬರಿನ ರಸ್ತೆ ಬರಲು ೨೦೦೨ರ ವರೆಗೆ ಕಾದು ನೋಡಬೇಕಾಯಿತು. ಅಲ್ಲಿಯ ತನಕ ಬೀದಿಯ ಅಲ್ಲಲ್ಲಿ ಕಡಿಮೆ ಅಧಿಕೃತ, ಹೆಚ್ಚು ಅನಧಿಕೃತ ಕಸದ ತೊಟ್ಟಿಗಳಿದ್ದವು. ನಗರ ಪಾಲಿಕೆ ಇಟ್ಟಿರುವ ಒಂದು ಸಿಮೆಂಟ್ ಸಿಲಿಂಡರೇ ಅಧಿಕೃತ ಕಸದ ತೊಟ್ಟಿಯಾದರೆ, ಬೇಲಿ ಇರಲಿ, ಇಲ್ಲದಿರಲಿ, ಖಾಲಿ ಸೈಟುಗಳು, ಟ್ರಾನ್ಸ್‌ ಫಾರ್ಮರುಗಳ ಬುಡ, ನಾಲ್ಕು ರಸ್ತೆ ಸೇರುವ ಮೂಲೆಗಳು, ಒಮ್ಮೆಲೇ ರಸ್ತೆ ಸ್ವಲ್ಪ ಅಗಲವಾದರೆ ಸಿಗುವ ಹೆಚ್ಚುವರಿ ಜಾಗ ಇತ್ಯಾದಿಗಳೇ ಅನಧಿಕೃತ ಕಸದ ತೊಟ್ಟಿಗಳಾಗಿದ್ದವು. ಅಧಿಕೃತ ಕಸದತೊಟ್ಟಿಗಳು ತುಂಬಿ ಹರಿದು, ಜನರು ಆಟಗಾರನ ಕಸುವು ಹಾಗೂ ನಿಖರತೆ ಇಲ್ಲದೇ ಸುಮಾರು ೨೦ ಅಡಿಗಳ ದೂರದಿಂದಲೇ ಎಸೆಯುವ ಕಸದ ಚೀಲಗಳು ಎಲ್ಲೆಲ್ಲೋ ಬಿದ್ದು ಎರಡನೇ ಮಹಾಯುದ್ಧ ಈಗ ತಾನೇ ನಡೆದುಹೋಗಿದೆ ಎಂಬಂತಿರುತ್ತಿದ್ದವು. ಈ ಕಸದ ತೊಟ್ಟಿಗಳೇ ಬೀದಿನಾಯಿಗಳಿಗೆ ವರದಾನವಾಗಿದ್ದವು. ಅವುಗಳ ಹೊಟ್ಟೆ ತಂಬಿ ಇನ್ನೂ ಆಹಾರ ಮಿಕ್ಕುತ್ತಿತ್ತು. ಹಾಗಾಗಿ ಆಹಾರದ ಕುರಿತಾಗಿ ಅವಕ್ಕೆ ಒಂದು ರೀತಿಯ ಅಸಡ್ಡಯೇ ಇತ್ತು. ಹಗಲಿಡೀ ಅಲ್ಲಲ್ಲಿ ಬಿದ್ದುಕೊಂಡು, ರಾತ್ರಿ ಮಾತ್ರ ಆಹಾರ ತಿಂದು ಸೊಕ್ಕಿ ನಿರ್ಜನ ರಸ್ತೆಯಲ್ಲಿ ಗಸ್ತು ತಿರುಗುತ್ತಾ ಅಪರೂಪಕ್ಕೆ ಹೋಗುವ ವಾಹನ ಗಾಲಿಗಳ ವಿರುದ್ಧ ಯುದ್ಧ ಸಾರಿ ಅಟ್ಟಿಸಿಕೊಂಡು ಬಂದು ಗಲಾಟೆ ಮಾಡುತ್ತಿದ್ದವು. ರಾತ್ರಿ ಮನೆಯ ಹತ್ತಿರದ ವೃತ್ತಗಳಲ್ಲಿ ಒಮ್ಮೆಲೇ ೨೦ ನಾಯಿಗಳು ಸೇರಿರುವುದನ್ನು ನೋಡುವ ಭಾಗ್ಯ ೨೦೦೩ರ ವರೆಗೂ ನನಗಿತ್ತು, ಎಲಾ ನಾಯಿಗಳನ್ನು ಲೆಕ್ಕ ಮಾಡುತ್ತಾ ವಾಹನ ಯಾಕೆ ಚಲಾಯಿಸಿದ ಎಂದು ನೀವು ಕೇಳಬಹುದು, ಮುಂದೆ ಉತ್ತರ ಸಿಕ್ಕೇ ಸಿಗುತ್ತದೆ.

ನಾಯಿಗಳು ರಾತ್ರಿ ವಾಹನದ ಹಿಂದೆ ಬೊಗಳುತ್ತಾ ಬಂದರೆ ರಸ್ತೆಯಲ್ಲಿ ನಡೆಯುವರು ಹಾಗೂ ದ್ವಿಚಕ್ರವಾಹನ ಸವಾರರು ಕಚ್ಚುವುದೆಂದು ಹೆದರುವುದಿದೆ, ಹೆದರುವುದು ಅನಾವಶ್ಯಕ. ನಾಯಿಗಳ ದ್ವೇ಼ಷ ನಿಮ್ಮ ಮೇಲಲ್ಲ, ನಿಮ್ಮ ವಾಹನದ ಮೇಲಲ್ಲ, ಬರೇ ವಾಹನದ ಚಕ್ರಗಳ ಮೇಲೆ.  ಒಮ್ಮೆ ವಾಹನ ನಿಲ್ಲಿಸಿ ನೋಡಿ, ಚಕ್ರಗಳತ್ತ ಬೊಗಳುತ್ತಾ ಇರುತ್ತವೆ. ಇದಕ್ಕೆ ಕಾರಣ, ಎಷ್ಟೋ ಬೀದಿ ನಾಯಿಗಳು ವಾಹನ ಚಕ್ರಗಳ ಅಡಿಯಲ್ಲಿ ಸಿಕ್ಕು ಸತ್ತಿವೆ ಇಲ್ಲಾ ಮಾರಣಾಂತಿಕವಾಗಿ ಗಾಯಗೊಂಡಿವೆ. ರಾತ್ರಿ ನಾಯಿಗಳ ದರ್ಬಾರು ನಡೆಯುತ್ತಿರುವಾಗ, ಹಿಂದಿನ ಕಹಿ ನೆನಪುಗಳ ಮಧ್ಯೆ ಒಂದು ಧಿಕ್ಕಾರದ ಘೋಷಣೆಯನ್ನು ಕೂಗಿ ತಮ್ಮ ತಮ್ಮ ಆತ್ಮ ಬಲವನ್ನು ಹೆಚ್ಚಿಸಿಕೊಳ್ಳುವ ಅವುಗಳ ಪ್ರಾಮಾಣಿಕ ಪ್ರಯತ್ನವಷ್ಟೇ.  ಅಪರೂಪಕ್ಕೆ ನಾಯಿಗಳು ಮನುಷ್ಯರನ್ನು ಕಚ್ಚುತ್ತವೆ, ಎರಡು ಕಾರಣಗಳಿಗಾಗಿ. ಒಂದು ಎದುರಿಗಿನ ಮನುಷ್ಯ ಹೆದರಿದರೆ ಆತ ತಮಗಿಂತ ಕಡೆ ಎಂಬ ನಿರ್ಧಾರದಲ್ಲಿ, ಇನ್ನೊಂದು ತಮ್ಮಷ್ಟೇ ಉದ್ದಕ್ಕಿರುವ ಮಕ್ಕಳು ಸುಲಭ ಧಾಳಿಗೆ ಸಿಗುವರೆಂದು. ಅದೂ ಇವೆರೆಡು ಕಾರಣಗಳಿದ್ದರೂ ನಾಯಿಗಳು ಹಸಿವು ಅತಿಯಾಗಿದ್ದರೆ ಮಾತ್ರ ಮನುಷ್ಯತ್ವದ ಲೆಕ್ಕಾಚಾರವನ್ನು ಮೀರಿದ ಅವುಗಳ ಪಶುತ್ವ ಮೆರೆಯುತ್ತದೆ. ಅದಕ್ಕಾಗಿಯೇ ನನ್ನ ವಾದ, ಬೀದಿನಾಯಿಗಳನ್ನು ಹುಟ್ಟಲು ಅವಕಾಶ ಕೊಡಬೇಡಿ, ಹುಟ್ಟಿಸಿದ ಮೇಲೆ ಆಹಾರ ಕೊಡದೇ ಹಸಿವಿನಲ್ಲಿ ಬಿಡಬೇಡಿ ಎಂಬುದಾಗಿ.

೨೦೦೨ರ ನಂತರ ನಮ್ಮಲ್ಲಿ ಕೆಂಪು ರಸ್ತೆ ಹೋಗಿ ಕಪ್ಪು ಡಾಂಬರ್‌ ರಸ್ತೆ ಬಂದಾಗ ನಾವೆಲ್ಲಾ ಇನ್ನು ಕೆಂಪು ಧೂಳಿಯನ್ನು ಮನೆಯಲ್ಲಿ ಒರೆಸುವ ಕೆಲಸ ಕಡಿಮೆ ಎಂದು ಕುಪ್ಪಳಿಸಿದೆವು. ಆದರೆ ಬಡಾವಣೆ ಬೆಳೆದು ಮನೆಗಳು ಹೆಚ್ಚಿ ವಾಹನ ಓಡಾಟ ಅತಿಯಾಗಿ ಬೇರೆ ಬಣ್ಣದ ಧೂಳಿ ಒಂದೆಡೆಯಾದರೆ ಮನೆಗಳನ್ನು ಕಟ್ಟುವಾಗ ಹರಡುವ ಮಣ್ಣು ಹಾಗೂ ಸಿಮೆಂಟಿನ ಧೂಳಿಯು ವಾಹನ ಹೋಗುವಾಗ ಹರಡುತ್ತಾ ಧೂಳನ್ನು ತಿನ್ನುತ್ತಾ ನಾವು ಇನ್ನೂ ಗಟ್ಟಿಯಾಗುತ್ತಲೇ ಬಂದೆವು. ಇಂದಿಗೂ ನಾನು ಬರೆಯಲು ಉಪಯೋಗಿಸುವ ಮೇಜನ್ನು ಎರಡು ದಿನ ಒರೆಸದಿದ್ದರೆ, ಮೂರನೇ ದಿನ ತೆಳ್ಳಗಿನ ಧೂಳಿನ ಮೇಲೆ ಚಿತ್ತಾರಗಳನ್ನು ಬಿಡಿಸುವ ಭಾಗ್ಯ ನನ್ನದಿರುತ್ತದೆ. ನಾನು ಮಾತ್ರ ಮನೆಯ ಸುತ್ತ ಕಾಡನ್ನು ಹೆಚ್ಚಿಸಿ ಈ ಧೂಳನ್ನು ಸುಮಾರು ಕಡಿಮೆ ಮಾಡಿಕೊಂಡು ಈಗ ಚಿತ್ತಾರಗಳನ್ನು ಬರೆಯಲು ಒಂದು ವಾರವೇ ಕಾಯಬೇಕಾಗುತ್ತದೆ ಅನ್ನಿ.

೨೦೦೨ರಲ್ಲಿ ಡಾಂಬರ್‌ ರಸ್ತೆ ಬಂದ ನಂತರ, ೨೦೦೩ರಲ್ಲಿ ಬೆಂಗಳೂರು ನಗರ ಪಾಲಿಕೆಯವರು ವಿಶ್ವ ಬ್ಯಾಂಕಿನ ಸಾಲದ ಆಧಾರದಲ್ಲಿ (ಸುಮಾರು ರೂಪಾಯಿ ೩,೦೦೦ಕೋಟಿಗಳ ವೆಚ್ಚ) ಬೆಂಗಳೂರಿನ ಮೂಲೆಮೂಲೆಗಳ್ಲಿ ಸ್ಯಾನಿಟರಿ ಪೈಪುಗಳನ್ನು ಹಾಕಿಸುವ ಯೋಜನೆ ಬಂತು, ಅಲ್ಲಿಯವರೆಗೆ ನಮ್ಮಂತಹ ರೆವಿನ್ಯೂ ಬಡಾವಣೆಗಳಲ್ಲಿ ಹೌದೋ ಅಲ್ಲವೋ ಎಂಬಂತೆ ಕೆಲಸ ಮಾಡುವ, ಆಗಾಗ ತುಂಬಿ ಹರಿಯದೇ ಇರುವ, ಸುಮಾರು ೨೫ ವರ್ಷಗಳ ಹಿಂದಿನ ಕೆಲವೇ ಮನೆಗಳಿಗೆ ಬೇಕಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಹಾಕಿದ ಸಪೂರ ಮಣ್ಣಿನ ಪೈಪುಗಳೇ ಇದ್ದು, ಎಷ್ಟೋ ಮನೆಯವರು ತುಂಬಿ ಹರಿಯದಾಗ ಚರಂಡಿಗೇ ಎಲ್ಲಾ ಬಿಟ್ಟು ನಾತಗಳ ಮಧ್ಯೆ ನಾಥನನ್ನು ಬೇಡುತ್ತಾ ಸಾಗುವ ಪಾಡು ನಮ್ಮದಿತ್ತು. ಈ ಯೋಜನೆಯ ಆದ ಕೂಡಲೇ ಸುಮಾರು ೨೦೦೫ರ ಹಾಗೆ ಸಾರ್ವಜನಿಕ ತಿಪ್ಪೇಗುಂಡಿಗಳು ಮಾಯವಾಗತೊಡಗಿದವು, ಕಾರಣ ನಗರಪಾಲಿಕೆಯವರು ಬಂದು ಕಸವನ್ನು ಎತ್ತುವುದೂ ಸಾಮಾನ್ಯವಾಗತೊಡಗಿತು. ಈ ಮಧ್ಯೆ ಖಾಲಿ ಸೈಟುಗಳೂ ಮಾಯವಾಗತೊಡಗಿದವು. ನಮ್ಮ ಬಡಾವಣೆಯಲ್ಲಿ ಬೀದಿನಾಯಿಗಳ ಸುವರ್ಣಯುಗ ಮುಗಿಯುತ್ತಾ ಬಂದಿತು. ಆದರೆ ನಮಗಿಂತ ಕಿಲೋಮೀಟರುಗಳ ದೂರದ ಹೊರವಲಯಕ್ಕೆ ಈ ಸುವರ್ಣಯುಗವು ವರ್ಗಾಯಿತವಾಗಿದೆ ಎಂಬಲ್ಲಿ ಯಾವುದೇ ಸಂಶಯ ಬೇಡ.

ಆದರೂ ನಮ್ಮ ಬಡಾವಣೆಯಲ್ಲಿ ೩೦ ಪ್ರತಿಶತ ನಾಯಿಗಳು ಉಳಿದವು. ಕಾರಣ, ೨೫-೫೦ ವರ್ಷಗಳಿಂದ ಬೀದಿಗೇ ಕಸ ಎಸೆಯುವ ಮಂದಿ, ಈ ಸ್ವಚ್ಛಂದದ ಆಟವನ್ನು ಬಿಡಲಾರರಾದರು. ಬೆಳಿಗ್ಗೆ ವಾಕಿಂಗ್‌ ಹೋಗುವಾಗ ತಮ್ಮದಲ್ಲದ ಯಾವುದೋ ರಸ್ತೆಯ ಮೂಲೆಯಲ್ಲಿ ಕಸ ಎಸೆಯುವ ಕ್ರೀಡೆಯನ್ನು ಬಿಡಲಾಗದವರಾದರು. ಮನೆಯಲ್ಲಿ ಇಬ್ಬರೂ ಕೆಲಸಕ್ಕೆ ಹೋಗುವರಾದರೆ, ಕಸದ ಮಂದಿ ಬಂದಾಗ ಕಸ ಕೊಡಲು ಇರುವುದಿಲ್ಲ, ಆದರೆ ತಮ್ಮ ಮನೆಗಳ ಮುಂದೆಯೇ ಕಸ ಇಟ್ಟುಹೋಗುವುದು ಸಲ್ಲ ಎಂದು ಎರಡು, ಮೂರು, ನಾಲ್ಕು ಚಕ್ರಗಳಲ್ಲಿ ಕಸದ ಚೀಲವನ್ನು ಹೊತ್ತು ಚಕ್ಕನೇ ಎಸೆದು ಹೋಗುವ ಅಪೂರ್ವ ಕ್ರೀಡೆ ಈಗಲೂ ನಡೆಯುತ್ತಿದೆ. ಕೆಳಗಿನ ಬಡಾವಣೆಯವರು ಮೇಲಿನ ನಮ್ಮ ಬಡಾವಣೆಗೆ ಕಸದವರು ಬರುವುದು ಹೆಚ್ಚು ಬಾರಿ ಎಂದು ನಾಲ್ಕು ರಸ್ತೆ ಸೇರುವಲ್ಲಿ ಹಾಕಿ ಹೋಗುವುದು ಗುಡ್ಡೆಗಳಾಗಿ, ಬೀದಿ ನಾಯಿಗಳ ಆಶಾವಾದಕ್ಕೆ ಇಂದಿಗೂ ಯಾವುದೇ ತೊಡಕಾಗಿಲ್ಲ. ರಾತ್ರಿ ದರ್ಬಾರಿನಲ್ಲಿ ಪ್ರತೀ ಕಸದ ಚೀಲವನ್ನು ಸೀಳಿ ಒಳಗಿದ್ದುದನ್ನು ತಿನ್ನುವ ಗಡಿಬಿಡಿಯಲ್ಲಿ ಈ ಕಸದ ಮೂಟೆಗಳು ಸುಮಾರು ೫೦ ಅಡಿಗಳ ತನಕ ಹರಡಿ, ಅದರೊಳಗದ್ದದ್ದೂ ಎಲ್ಲಾ ಕಡೆ ಬಿಕ್ಕಿ, ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ನಮ್ಮ ರಸ್ತೆ ವೈಭವಗಳು ಈಗಲೂ ಅಲ್ಲಲ್ಲಿ ಮುಂದುವರೆಯುತ್ತಿದೆ. ಬೆಳಿಗ್ಗೆ ಪೇಪರ್‌ ಪಡೆಯಲು ಗೇಟ್‌ ಹತ್ತಿರ ಬಂದಾಗ, ನಮ್ಮ ಮನೆಯ ಸುತ್ತ  ನಾಯಿಗಳು ಹರಿದು ತಿಂದು ಉಳಿದ ಸಣ್ಣ ಮಕ್ಕಳ ಡೈಪರುಗಳು (ತಾತ್ಕಾಲಿಕ ಒಳಚಡ್ಡಿಗಳು) ಹರಡಿದುದ ನೋಡಿ, ನಗುವುದೂ ಅಳುವುದೂ ಎರಡೂ ಸಾಧ್ಯವಾಗದೇ, ಎಲ್ಲೆಂದರಲ್ಲಿ ಕಸ ಎಸೆಯುವ ನಾಯಿಗಳಿಂತ ಕಡೆಯಾದ ಈ ಮನುಷ್ಯರ ಮಧ್ಯೆ ಈ ನಾಯಿಗಳಿಗೆ ಊಟವಿಟ್ಟು ಅವನ್ನು ಮೇಲೆತ್ತುವುದೇ ಲೇಸೆನ್ನಿಸುತ್ತದೆ.

ನಾವೀಗ ನಾಯಿಗಳ ಸುವರ್ಣಯುಗಕ್ಕೆ ವಾಪಾಸಾಗೋಣ. ನಮ್ಮ ಮಕ್ಕಳೂ ಸಣ್ಣವರಿದ್ದರು, ಪ್ರತೀ ಬಾರಿಯ ಕಾರಿನ ಪ್ರಯಾಣದ ಸಮಯವೇ ನನಗೆ ಅವರೊಂದಿಗೆ ಆಡಿ ಹಾಡುವುದೇ ಸಮಯದ ಸದುಪಯೋಗವಿತ್ತು. ಇತ್ತ ರಸ್ತೆಯ ಮೇಲೆ ಕಣ್ಣಿಟ್ಟೇ ನನ್ನ ಆಟಗಳು ನಡೆಯಬೇಕಿತ್ತು. ರಸ್ತೆಯನ್ನು ನೋಡುತ್ತಾ ಹೋಗುವಾಗ, ಅಲ್ಲಲ್ಲಿ ನಾಯಿಗಳು ಇಲ್ಲದೇ, ಒಮ್ಮೆಲೇ ಹೆಚಾಗುವುದನ್ನೂ ಗಮನಿಸಿದ್ದೆ, ಹಗಲಿಗಿಂತ ರಾತ್ರಿ ನಾಯಿಗಳ ಸಂತೆ ಹೆಚ್ಚುವುದನ್ನೂ ನೋಡಿದೆ. ಹೀಗೆ ದೇಶ ಮತ್ತು ಕಾಲ ಬದಲಾದಂತೆ ನಾಯಿಗಳ ಸಂಖ್ಯೆ ಬದಲಾಗುವುದೇ ಒಂದು ಆಟದ ಅವಕಾಶವಾಯಿತು. ನಮ್ಮ ಕಾರು ಒಂದು ಕಡೆಯಿಂದ ಹೊರಟು ಇನ್ನೊಂದು ಕಡೆ ತಲುಪುವಾಗ ಸುಮಾರು ೫-೧೫ ಕಿಲೋಮೀಟರಗುಳ ದಾರಿಯಲ್ಲಿ ಎಷ್ಟು ನಾಯಿಗಳು ಸಿಗುತ್ತವೆ ಎಂಬ ಅಂದಾಜು ಹಾಕಿ, ಯಾರ ಅಂದಾಜು ವಾಸ್ತವಕ್ಕೆ ಅತೀ ಹತ್ತಿರವಾಗುತ್ತದೆ ಎಂಬುದೇ ನಾವಾಡುವ ಆಟ. ಒಬ್ಬ ಮಗಳು ರಸ್ತೆಯ ಒಂದು ಬದಿ ನೋಡುತ್ತಾ ಹೋಗಬೇಕು, ಇನ್ನೊಂದು ಮಗಳು ರಸ್ತೆಯ ಇನ್ನೊಂದು ಬದಿ ನೋಡಬೇಕು, ನಾನೋ ೨೦-೨೦ರ ದೃಷ್ಟಿಯ ನನ್ನದೇ ನೋಟದಲ್ಲಿ ಅವರು ತಪ್ಪಿಸಿಕೊಂಡದ್ದನ್ನೂ ನೋಡಲು ಯೋಗ್ಯನಾಗಿದ್ದೆ. ಕೆಲವೊಮ್ಮೆ ಬರೇ ವ್ಯವಹಾರ ಕೇಂದ್ರಗಳ ವಲಯದಲ್ಲಿ ನಾಯಿಗಳು ಲೆಕ್ಕಕ್ಕೆ ಸಿಗದೇ ಒಮ್ಮೆಲೇ ಒಂದು ದೊಡ್ಡ ಕಸದ ತೊಟ್ಟಿಯ ಸುತ್ತ ೧೫-೨೦ ನಾಯಿಗಳು ಧುತ್ತನೇ ಸಿಕ್ಕಿ ಸರಿಯಾಗಿ ಲೆಕ್ಕ ಮಾಡುವ ಮೊದಲೇ ಕಾರು ಮುಂದೆ ಹೋಗಿ ನಮ್ಮ ನಮ್ಮ ಸೂರ್ಗೋಳಿ ಲೆಕ್ಕಗಳ ಸಮನ್ವಯದ ಸಂವಾದ ನಡೆಯುತ್ತಿರುವಾಗಲೇ ಮತ್ತೊಂದು ನಾಯಿಗಳ ಸಮ್ಮೇಳನ ಎದುರಾಗಿ ಕಾರಿನೊಳಗಿನ ಎಲ್ಲರ ಇಂದ್ರಿಯಗಳ ಕೆಲಸವು ತಾರಕಕ್ಕೇರಿ ದಾರಿ ನಡೆದುದೇ ಗೊತ್ತಾಗುತ್ತಿರಲಿಲ್ಲ. ರಾತ್ರಿ ಪ್ರಯಾಣವಾದರೆ, ಹತ್ತು ಗಂಟೆಯ ನಂತರ ನಾಯಿಗಳ ಮೆರವಣಿಗೆ ಹೊರಡುವುದರಿಂದ ಆಯಾ ಬದಿಯ ಕಿಟಕಿಯವರಿಗೆ ಲೆಕ್ಕ ಮಾಡುವುದೇ ಕಷ್ಟವಾಗಿ, ನಾನು ಇಬ್ಬರ ಲೆಕ್ಕವನ್ನೂ ಸರಿಮಾಡುವತ್ತ ಕಾರ್ಟೂನು ಕ್ಯಾರೆಕ್ಟರಿನವ ಕಣ್ಣು ಹೊರಳಿಸಿದಂತೆ ಹೊರಳಿಸುತ್ತಾ ಹೋಗಿ, ಯಾವುದೇ ಆಕ್ಸಿಡೆಂಟು ಆಗದೇ ಇರುವುದೇ ದೇವರ ಅಸ್ತಿತ್ವಕ್ಕೆ ಪುರಾವೆಯೇ ಎಂದು ಪ್ರಶ್ನಿಸುವಂತಾಯಿತು. ರಾತ್ರಿ ಪ್ರಯಾಣದಲ್ಲಿ ಹಗಲು ಲೆಕ್ಕಾಚಾರದವರ ನಾಯಿಗಳ ಅಂದಾಜು ನಗೆಪಾಟಲಿಗೆ ಈಡಾದರೆ, ಈ ಸೋಲಿನ ಕಾರಣ ಮುಂದಿನ ಹಗಲಿನಲ್ಲಿ ರಾತ್ರಿಯ ಲೆಕ್ಕವಿಟ್ಟವರು ಮತ್ತೆ ಸೋತು ಅಂದಾಜು ಮತ್ತು ವಾಸ್ತವಗಳ ಮಧ್ಯೆ ಜೀವನವನ್ನು ಆಟದಂತೆ ಮುನ್ನಡೆಸಬೇಕೆನ್ನುವ ಪಾಠವಂತೂ ನಮ್ಮ ಮಕ್ಕಳಿಗೆ ಗಟ್ಟಿಯಾಗುತ್ತಾ ಹೋಯಿತು. ಇತ್ತ ಸುಮಾರು ಹತ್ತು ಕಿಲೋಮೀಟರುಗಳ ದೂರದಲ್ಲಿ ೧೫೦ಷ್ಟು ಸಿಗುವ ನಾಯಿಗಳ ಸಂಖ್ಯೆ ಕ್ರಮೇಣ ಹತ್ತಿಪ್ಪತ್ತಕ್ಕೂ ಕಡಿಮೆ ಇಳಿದು ಆಟದ ಮಜ ಕಡಿಮೆಯಾಗತೊಡಗಿತು. ಹಾಗಾಗಿ ಬದಲಿಗೆ ದನಗಳ ಸಂಖ್ಯೆ, ಒಂದೇ ಮಾದರಿಯ ಕಾರುಗಳ ಸಂಖ್ಯೆ, ರಾತ್ರಿ ಹೋಗುವ ಒಕ್ಕಣ್ಣಿನ ಕಾರುಗಳ ಸಂಖ್ಯೆ (ಎದುರಿನ ಒಂದು ದೀಪದ ಬಲ್ಬ್‌ ಕೆಲಸ ಮಾಡದಿರುವುದು) ಹೀಗೆ ಬೇರೆ ಬೇರೆ ಅಂಕಿಅಂಶಗಳ ಸುತ್ತ ಈ ಅಂದಾಜುಗಳ ಆಟ ಸ್ವಲ್ಪ ಕಾಲ ಮುಂದುವರೆದರೂ ಈ ನಾಯಿಗಳು ಕೊಟ್ಟ ಮಜ ಬೇರೆಯದು ಕೊಡಲಾಗಲಿಲ್ಲ. ಇತ್ತ ನನ್ನ ಮಕ್ಕಳು ಈ ಆಟದಲ್ಲಿ ನನ್ನನ್ನೇ ಸೋಲಿಸುವಷ್ಟು ಗಟ್ಟಿಯಾಗುವಾಗ ಅವರನ್ನು ಹೆದ್ದಾರಿಯ ಮಾರ್ಗದಲ್ಲಿ ಇದೇ ಆಟಕ್ಕೆ ಎಳೆದೆ. ಬೆಂಗಳೂರಿನ ರಸ್ತೆಯ ಲೆಕ್ಕಾಚಾರಕ್ಕೆ ವಿರುದ್ಧವಾದ ಅಲ್ಲಿನ ಲೆಕ್ಕಾಚಾರ, ಹೆಚ್ಚಿನ ವೇಗದಲ್ಲಿ ಕಾರು ಹೋಗುವುದರಿಂದ ನಾಯಿಗಳ ಗುಂಪೇ ಸಿಕ್ಕರೆ ಲೆಕ್ಕವೇ ಅಡಿಮೇಲಾಗುವುದು, ಹೆದ್ದಾರಿಯ ಅತಿವೇಗದಲ್ಲಿ ಕಣ್ಣು ಹಾಯಿಸುವ ಅಪಾಯ ಬೇಡವೆಂದು ಎರಡು ಬದಿಗಳ ಕಿಟಕಿಗಳ ಮೂಲಕ ಮಕ್ಕಳು ಕೊಡುವ ಲೆಕ್ಕವೇ ಅಂತಿಮವಾಗಿ ಒಬ್ಬರನ್ನೊಬ್ಬರು ನಂಬುವುದು, ನಂಬುವಂತೆ ಬದುಕುವುದು ಗಟ್ಟಿಯಾಗುತ್ತಾ ಹೋಯಿತು. ಮೊದಮೊದಲು ಹೆದ್ದಾರಿಯಲ್ಲಿ ಬೇರೆಯೇ ಅಂದಾಜು ಬೇಕಾದ ಕಾರಣ ನಾನೇ ಗೆಲ್ಲುತ್ತಾ ಹೋದರೂ ಕ್ರಮೇಣ ನನ್ನ ಮಕ್ಕಳಿಗೇ ನಾವಿಬ್ಬರೂ ದೊಡ್ಡವರು ಸೋಲತೊಡಗಿದ್ದು ಖುಷಿಯನ್ನೇ ಕೊಟ್ಟಿತು. ಅಪ್ಪ ಅಮ್ಮರನ್ನೇ ಪದೇಪದೇ ಸೋಲಿಸಲು ಸಾಧ್ಯ ಎಂಬುದು ಗಟ್ಟಿಯಾದ ಮೇಲೆ ಮಕ್ಕಳಿಗೂ ಈ ಆಟದ ಮಜ ಕಡಿಮೆಯಾಗತೊಡಗಿತು, ಕಿವಿಗೆ ಹೂವಿಟ್ಟಂತೆ ಫೋನಿನ ಇಯರು ಪೋನುಗಳು ಬಂದು ಸೇರಿ ಬೇರೆ ಆಟಗಳೇ ನಿಂತವು, ಇತ್ತ ಒಬ್ಬಂಟಿಯಾಗಿ ಕಾರು ಬಿಡುವ ನಾನು ಬದಲಾಗುತ್ತಿರುವ ಪ್ರಪಂಚದಲ್ಲಿ ನಾಯಿಗಳಿಗೂ ಹಾಗೂ ನಾವುಗಳಿಗೂ ಹೆಚ್ಚೇನೂ ವ್ಯತ್ಯಯ ಇಲ್ಲದಿರುವ ವಾಸ್ತವಗಳ ಸುತ್ತ ಹೊಸ ತತ್ವಜ್ಞಾನಗಳ ಸುಳಿವನ್ನು ಜಾನಿಸುವುದೇ ಜಾಸ್ತಿಯಾಗುತ್ತಾ ಬಂತು.

ಮುಂದಿನ ಸಂಚಿಕೆಯಲ್ಲಿ ಈ ಬೀದಿ ನಾಯಿಗಳ ಸಾಮಾಜಿಕ ವ್ಯವಸ್ಥೆಯ ಬಗ್ಗೆ ನಾ ಕಂಡುಕೊಂಡುದರ ಬಗ್ಗೆ  ಬರೆಯುವೆ.   

ನಮಸ್ತೆ

ನಟರಾಜ ಉಪಾಧ್ಯ     

Friday, January 10, 2020

ಬೆಂಗಳೂರು ಬೀದಿ ನಾಯಿಗಳ ಬದುಕು – ಭಾಗ ೧



ಬೆಂಗಳೂರಿನ ಸಾರ್ವಜನಿಕ ಜೀವನದಲ್ಲಿ ಕಂಡರೂ ಕಾಣಿಸದಂತೆ ಭಾಸವಾಗುವ ಪ್ರಾಣಿ ಪ್ರಪಂಚವೊಂದಿದೆ. ನಾಗರಿಕರ ಜೀವನದೊಂದಿಗೆ ಅವುಗಳ ಜೀವನವೂ ಮಿಳಿತವಾಗಿದೆ. ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಅವುಗಳ ಅಸ್ತಿತ್ವದ ಪ್ರಪಂಚ ಅನಾವರಣಗೊಳ್ಳುತ್ತಾ ಹೋಗುತ್ತದೆ. ನಾನು ಕಳೆದ ೨೫ ವರ್ಷಗಳಿಂದ ಈ ಪ್ರಪಂಚವನ್ನು ಗಮನಿಸುತ್ತಲೇ ಬಂದಿದ್ದೇನೆ. ಒಂದೈದು ವರ್ಷ ಬೀದಿ ಛಾಯಾಗ್ರಹಣ ಮಾಡಿದ್ದೆ. (ಬೀದಿ ಛಾಯಾಗ್ರಹಣದ ಸುತ್ತಲಿನ ಪಾಠಗಳಿಗಾಗಿ ಮುಂದೆ ಬೇರೆಯಾಗಿಯೇ ಬರೆಯುವೆ). ಬೀದಿಯ ದೃಶ್ಯ ವೈಶಿಷ್ಠ್ಯಗಳ ನಿರ್ಮಾಣದಲ್ಲಿ ಈ ಪ್ರಾಣಿಗಳ ಕರಾಮತ್ತು ಸಾಕಷ್ಟು ಇರುವುದೇ ಛಾಯಾಗ್ರಹಣಕ್ಕೆ ಉತ್ತೇಜನವನ್ನೇ ಕೊಡುತ್ತಿತ್ತು. ಬೇರೆ ಹವ್ಯಾಸಗಳ ಒತ್ತಡದಲ್ಲಿ ಈ ಬೀದಿ ಛಾಯಾಗ್ರಹಣ ಇತ್ತೀಚೆಗೆ ಪೂರ್ಣ ಸ್ಥಗಿತಗೊಂಡಿದೆ. ವಾಸ್ತವದ ಗಮನಿಸುವಿಕೆಗೆ ಮಿಗಿಲಾಗಿ ಅದರೊಂದಿಗೆ ನನ್ನ ನೃತ್ಯವನ್ನೇ ಹೆಚ್ಚಿಸುವ ಉತ್ಸಾಹದಲ್ಲಿ ಬರೇ ಗಮನಿಸುವ ಗಿರವೂ ಅದರ ಸುತ್ತಲಿನ ಕಲಾಭಿವ್ಯಕ್ತಿಯೂ ಕಡಿಮೆಯಾಗುತ್ತಿದೆ.

ಬೆಂಗಳೂರು ಬೀದಿಗಳಲ್ಲಿ ಎದ್ದು ಕಾಣುವ ಪ್ರಾಣಿಗಳೆಂದರೆ ದನಗಳು, ನಾಯಿಗಳು, ಬೆಕ್ಕುಗಳು, ಕಾಗೆಗಳು, ಅಳಿಲುಗಳು, ಹದ್ದುಗಳು, ಇಲಿಗಳು, ಪಾರಿವಾಳಗಳು ಹಾಗೂ ಕೆಲವೇ ಕಡೆಗಳಲ್ಲಿ ಗಿಳಿಗಳು. ಅಪವಾದವೆಂಬಂತೆ ಕೃಷ್ಣರಾಜ ಮಾರುಕಟ್ಟೆಯ ಅಕ್ಕಿ ಅಂಗಡಿಯ ಮುಂದೆ ಒಮ್ಮೆ ಹಾಗೂ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಒಳಗೆ ಗುಬ್ಬಿಗಳ ಕಲರವವನ್ನು ನೋಡಿ ನಗರ ಪರಿಸರದಲ್ಲೂ ಗುಬ್ಬಿಗಳು ಪೂರ್ಣ ನಾಶವಾಗಿಲ್ಲ ಎಂಬುದಾಗಿಯೂ ತಿಳಿದೆ.

ಸಧ್ಯಕ್ಕೆ ಈ ಲೇಖನಮಾಲೆಯು ಬೀದಿ ನಾಯಿಗಳ ಪ್ರಪಂಚದ ಬಗ್ಗೆ ಸೀಮಿತವಾಗಿರುತ್ತದೆ. ಲಗಾಯ್ತಿನಿಂದ ಬೆಂಗಳೂರು “ಅಡ್ಜೆಸ್ಟ್‌ ಮಾಡ್ಕೋ ಗುರು” ಎಂಬ ತತ್ವವನ್ನೇ ಹೆಚ್ಚು ಅವಲಂಬಿಸಿದ್ದು, ಹೇಗೆ ಜನರು ಬೀದಿನಾಯಿಗಳ ಸುತ್ತ ಅಡ್ಜೆಸ್ಟ್‌ ಆಗಿದ್ದಾರೆ ಎಂಬುದು ನನ್ನ ಕುತೂಹಲವನ್ನು ಕೆರಳಿಸಿದರೆ, ಅದಕ್ಕಿಂತ ಮಿಗಿಲಾಗಿ ಈ ನಾಯಿಗಳು ಮನುಷ್ಯರ ಸುತ್ತ ಇನ್ನೂ ಪರಿಣಾಮಕಾರಿಯಾಗಿ ಅಡ್ಜೆಸ್ಟ್‌ ಆಗಿದ್ದು ನನ್ನನ್ನು ಮೆಚ್ಚಿಸಿತು. ಮೊದಮೊದಲು ಕುತೂಹಲ, ಆಮೇಲೆ ಛಾಯಾಗ್ರಹಣ, ಕೃಮೇಣ ಮನುಷ್ಯ ಸಂಬಂಧಗಳನ್ನು ಮೀರಿ ನನಗೆ ಗಹನವಾದ ಅರ್ಥಗಳನ್ನು ಕೊಡಬಲ್ಲ ಅವುಗಳ ನೈಸರ್ಗಿಕ ಸ್ವಭಾವದ ಆಕರ್ಷಣೆ, ಕೊನೆಯಲ್ಲಿ ಈ ನಾಯಿಗಳ ಹುಟ್ಟುವಿಕೆಯ ವಿಷವರ್ತುಲಕ್ಕೆ ನಮ್ಮ ನಾಗರಿಕ ವ್ಯವಸ್ಥೆಯ ಅಧ್ವಾನಗಳೇ ಕಾರಣಗಳೆಂದು ತಿಳಿದ ಮೇಲೆ ನನ್ನ ನೆರೆಕೆರೆಯ ನಾಯಿಗಳು ಹಸಿವಿನಿಂದ ನರಳಬಾರದೆಂಬ ನೈತಿಕ ನಿಲುವಿಗೆ ನಾ ಬದ್ಧನಾದೆ, ನಾನಿಡುವ ಆಹಾರದ ಸುತ್ತ ನಾಯಿ ಪ್ರಪಂಚಗಳ ಮೇಲುಬೀಳುಗಳ ಅವಲೋಕನ ಹೀಗೆ ನಾಯಿಪಾಡೇ ನನ್ನ ಜೀವನದ ಅರ್ಥವೊಂದಾಗಿ ಹೋಯಿತು. ಈ ನಾಯಿಗಳ ಮೇಲೆ ಮನುಷ್ಯರ ಪ್ರಭಾವ ಇದ್ದ ಹಾಗೇ ಮನುಷ್ಯರ ಮೇಲೂ ಅವುಗಳ ಪ್ರಭಾವವೂ ಇದ್ದುದನ್ನು ಗಮನಿಸಿ, ಸಸ್ಯ-ಪ್ರಾಣಿ-ಮಾನವ ಈ ಸಂಕುಲಗಳ ನಡುವಿನ ಜೀವನ ಸಮನ್ವಯದ ಕುರಿತಾದ ನನ್ನ ಆಸಕ್ತಿ ಬೆಳೆಸುತ್ತಾ ಹೋದೆ. ಬೆಂಗಳೂರಿನ ಮಾನವ ನಾಗರಿಕತೆಯಲ್ಲಿ ಕಾಡು ಮನುಷ್ಯನ ಗುಣವೂ ಆಗಾಗ ರಾರಾಜಿಸುವುದನ್ನು ನೋಡಿದ ಮೇಲೆ, ಅದನ್ನು ಒಪ್ಪಿ ಅಪ್ಪಿಕೊಂಡ ಮೇಲೆ, ಸಸ್ಯ, ಪ್ರಾಣಿ ಮತ್ತು ಮಾನವರ ನಡುವಿನ ಜೀವನದ ಕೊಡು ತೆಕೋ ವ್ಯವಹಾರಗಳು ಸಾಕಷ್ಟು ಇರುವುದನ್ನು ಗಮನಿಸಿದ ಮೇಲೆ, ಬೆಂಗಳೂರು ಬಸ್ಸುಗಳ ಮೇಲೆ ಕಾಡಿಲ್ಲದೇ ನಾಡಿಲ್ಲ ಎಂಬ ಸರಕಾರದ ಘೋಷಣೆಗಳನ್ನೇ ಓದಿದ ಮೇಲೆ, ಎಲ್ಲೆಲ್ಲೂ ಕಾಡೇ ನಾಡಾಗುತ್ತಿರುವಾಗ, ನಾಡಿನಲ್ಲೇ ಕಾಡಾಗಬಾರದೇಕೆ ಎಂಬ ಪ್ರಶ್ನೆಯನ್ನೇ ಹಾಕಿಕೊಂಡೆ. ನನ್ನ ಮನೆಯ ಮೇಲೆ ಮತ್ತು ಸುತ್ತಲೂ ನಾಡಿನ ಕಾಡನ್ನೇ ಮಾಡಹೊರಟೆ, ಸಾಧ್ಯವಾದಷ್ಟು ಮಟ್ಟಿಗೆ ಮಾಡಿ ನಲಿದಿದ್ದೇನೆ. ಕಾಡು-ನಾಡು-ಪ್ರಾಣಿ- ಸಸ್ಯ-ಮನುಷ್ಯ-ನಾಗರಿಕತೆ-ಪರಿಸರ ಹೀಗೆ ಇವೆಲ್ಲಗಳ ಒಟ್ಟು ಸಮನ್ವಯಕ್ಕಾಗಿ ಮನುಷ್ಯರಾದ ನಾವು ಏನೇನು ಮಾಡಬೇಕಾಗಿದೆ ಎಂಬ ಚಿಂತನೆಯನ್ನು ಮುಂದುವರಿಸುತ್ತಲೇ ಬಂದಿದ್ದೇನೆ.

ಇನ್ನೊಂದು ಕಡೆ ನಾಯಿ ಪಾಡು ಮತ್ತು ಮನು಼ಷ್ಯನ ಪಾಡು ಇವುಗಳ ನಡುವಿನ ಸಾಂಗತ್ಯವನ್ನೂ ಗಮನಿಸುತ್ತಾ ಬಂದಿದ್ದೇನೆ.ಆಧ್ಯಾತ್ಮ ಚಿಂತನೆ ಹಾಗೂ ತಾತ್ವಿಕ ಚಿಂತನೆಗಳಲ್ಲಿ ಬೀದಿ ನಾಯಿಗಳ ವಾಸ್ತವವನ್ನು ಹೊರಗಿಡುವುದೇ ವಿವೇಕವೆಂದು ತಿಳಿದಿದ್ದೇನೆ. ಮಾನವ ಪಾಡಿನ ಸುತ್ತ ಸಾಕಷ್ಟು ನನ್ನದೇ ರೀತಿಯಲ್ಲಿ ಸಂಶೋಧನೆ ಮಾಡುತ್ತಿರುವ ನನಗೆ ಈ ಸಂಶೋಧನೆಯಲ್ಲಿ ಮಾನವನನ್ನು ಬರೇ ನಾಗರಿಕತೆಯ ಮಾನವಶಾಸ್ತ್ರಗಳ ತಳಹದಿಯಲ್ಲಿ ಮಾತ್ರ ನೋಡದೇ ಒಟ್ಟು ಪರಿಸರದ ಆಧಾರದಲ್ಲಿ ನೋಡುವುದೇ ಮುಖ್ಯವಾಗಿ ಕಂಡಿದೆ. ಹಾಗಾಗಿ ನಾಡಿನ ಪ್ರಾಣಿ ಪ್ರಪಂಚ ಅಪೂರ್ವವಾಗಿ ನನ್ನ ಗಮನ ಸೆಳೆದಿದೆ, ಆ ಪ್ರಪಂಚದಲ್ಲಿ ಬೀದಿ ನಾಯಿಗಳದ್ದೇ ಪ್ರಮುಖ ಆಕರ್ಷಣೆಯಾಗಿದೆ, ಕಾರಣ ನಾಯಿ ಪಾಡು ಹಾಗೂ ಮಾನವ ಪಾಡುಗಳ ನಡುವಿನ ಸಾಂಗತ್ಯಗಳು ಹಾಗೂ  ಬೀದಿನಾಯಿಗಳ ಬದುಕಿನ ಹೋರಾಟದ ಸುತ್ತ ಮಾನವ ಬದುಕಿನ ಹೋರಾಟದಲ್ಲಿ ಹೆಚ್ಚು ಅರ್ಥವನ್ನೂ ಹಾಗೂ ಸಾಧ್ಯತೆಗಳನ್ನೂ ಹುಟ್ಟಿಸುವ ಸ್ಫೂರ್ತಿಗಳನ್ನು ಕಂಡೆ. ಈ ಸಂಶೋಧನೆಯ ಸುತ್ತ ನನ್ನ ವೈಯಕ್ತಿಕ ಜೀವನವನ್ನೂ ನನಗರಿವಿಲ್ಲದೇ ನಾಯಿಪಾಡಿಗೆ ಇಳಿಸಿಕೊಂಡೆ ಹಾಗೂ ನಾಯಿಪಾಡಿನಲ್ಲೂ ಮಾನವ ಜೀವನಕ್ಕೆ ಹೇಗೆ ಅರ್ಥಗಳನ್ನು ಕಲ್ಪಿಸಿ ಜೀವನದ ಆಟವನ್ನು ಅಮೋಘವಾಗಿ ಗೆಲ್ಲಬಲ್ಲ ಎಂಬ ಸತ್ಯಗಳನ್ನೂ ಕಂಡುಕೊಂಡೆ. ನಮ್ಮ ವಾಸ್ತವದ ಅರಿವಿಲ್ಲದ ಆಧ್ಯಾತ್ಮ ಬರೇ ಬೊಗಳೆಯಾಗಿ ನಾಯಿ ಬೊಗಳುವುದಕ್ಕಿಂತಲೂ ಅರ್ಥಹೀನವಾಗುವುದನ್ನೂ ಗಮನಿಸಿದ್ದೇನೆ. ವಾಸ್ತವದ ಅರಿವಿನ ಸುತ್ತ ಸಂಶೋಧಿಸುತ್ತಾ “ನಾನು” ಎಂಬ ಅಸ್ತಿತ್ವ ಹಾಗೂ ಅದರ ಸುತ್ತಲಿನ ಒಟ್ಟು ಪ್ರಪಂಚ ಇವೆರೆಡರಲ್ಲೂ ಸ್ತರಗಳನ್ನು ಗಮನಿಸಿ ಅವುಗಳನ್ನು ಅರ್ಥವಿಸುತ್ತಾ ಹೋದೆ. “ಯೋಗ”ವು ಸಾರುವ ಪೂರ್ಣತೆಯ ಅನುಭಾವದ ಸಂಪೂರ್ಣ ಶರಣಾಗತಿಯ ಸಿದ್ಧಿಯನ್ನೂ ಪಡೆದುಕೊಂಡೆ, ಸಧ್ಯಕ್ಕೆ ಅಂತಹ “ನಾಕ”ದ ನಿತ್ಯ ಸುಖದ ವೇದಿಕೆಯಲ್ಲೇ ಇದ್ದು ಉಳಿದ “ನರಕ”ಗಳ ಜೊತೆಗೆ ಅನುಸಂಧಾನವನ್ನು ಏರ್ಪಡಿಸುವ ಸಾಧ್ಯತೆ ಹಾಗೂ ಬಾಧ್ಯತೆಗಳ ಬಗ್ಗೆ ಸಂಶೋಧನೆ ಮುಂದುವರಿದಿದೆ, ಆ ಮೂಲಕ ದೇಶ ಹಾಗೂ ಕಾಲದ ನಿತ್ಯ ಬದಲಾವಣೆಯ ಸುತ್ತಲಿನ ವಿಧಿಯ ನೃತ್ಯವಿವಿಧ್ಯಗಳ ಹೊಸ ಕಲಾಪ್ರಪಂಚವೇ ಅನಾವರಣಗೊಳ್ಳುತ್ತಿದೆ. ನೈಸರ್ಗಿಕವಾದ ಪರಿಸರದ ಭಾಗ್ಯಗಳು,  ಮಾನವ ಸಾಧ್ಯತೆಗಳು, ವಿಧಿಯ ಅಮೋಘ ನಿತ್ಯ ನೃತ್ಯದ ಆಟ, ಇದರ ಹಿಂದೆ ಇರಬಹುದಾದ ದೇವರ ಆಟ, ಆ ಆಟದಲ್ಲಿನ ಓಟಗಳಲ್ಲಿರಬಹುದಾದ voluntary & involuntary (autonomous and otherwise) ತತ್ವಗಳ ಸ್ಪಷ್ಟತೆ, ಎಲ್ಲಕ್ಕಿಂತ ಮುಖ್ಯವಾಗಿ ನಿಸರ್ಗ-ಮಾನವ-ವಿಧಿ-ದೇವರು ಈ ಎಲ್ಲಾ ಗೊಂದಲಮಯ ನಿತ್ಯ ವ್ಯವಹಾರಗಳ ನಡುವಿನ ಅರ್ಧ ಸತ್ಯಗಳ ನಡುವೆ ಈ ಆಧುನಿಕ ಪ್ರಪಂಚದಲ್ಲಿ ವೈಯಕ್ತಿಕ ಬದುಕಿಗೂ ಹಾಗೂ ಅದರ ಸುತ್ತಲಿನ  ಸ್ತರಗಳಲ್ಲಿರುವ ಸಾಂಘಿಕವಾದ ನಾಗರಿಕ ಬದುಕಿಗೂ(which includes economy, politics, technology, culture, philosophy etc.) ನಡುವಿನ ಹೆಚ್ಚಿನ ಸಮನ್ವಯ ಸಾಧಿಸುವತ್ತ ಹೊಸ ವಿಶ್ವ ಧರ್ಮವೇ ಸ್ಥಾಪಿತವಾಗಲು ಬೇಕಾಗುವ ಪೂರ್ವಭಾವಿ ಸಂಶೋಧನೆಗಳಿಗೇ ನನ್ನ ಉಳಿದ ಜೀವನವನ್ನು ಹವ್ಯಾಸವಾಗಿ ಸಮರ್ಪಿಸಿಕೊಂಡಿದ್ದೇನೆ.

ಅಯ್ಯಬ್ಬಾ, ಈ ಬೀದಿ ನಾಯಿಗಳ ಜಾಡು ಹಿಡಿದು ಹೊರಟದ್ದು, ಎಲ್ಲೆಲ್ಲೋ ಹೋಗಿ, ಭಗವಂತನನ್ನೂ ದಾಟುವ ಧ್ರಾಷ್ಟ್ಯವನ್ನೂ ಬೆಳೆಸಿದುದು ಒಂದು ಕಡೆಯಾದರೆ ನಾಯಿಪಾಡಿನ ಸುತ್ತಲೂ ಶರಣಾಗತಿಯನ್ನು ಕರುಣಿಸಿ, ಎಲ್ಲಾ ರೀತಿಯ ಎಲ್ಲಾ ಹುಚ್ಚುಗಳ ಸುತ್ತ ಅನುಸಂಧಾನವನ್ನೇರ್ಪಡಿಸುವ ವಿವೇಕದ ಸಾಧ್ಯತೆಯನ್ನೂ ದಯಪಾಲಿಸಿದೆ, ನನ್ನ ವೈಯಕ್ತಿಕ ಬದುಕಿನ ಆಟಕ್ಕೆ ಅತಿಯಾದ ರಂಗೇರಿಸಿ ನಿನ್ನಿಂದೇನು ಕೊಡುಗೆ ಮುಂದೆ ಎಂಬ ಸವಾಲನ್ನೂ ಒಡ್ಡಿದೆ. ಮುಂದಿನ ದಾರಿ ದುರ್ಗಮವಿದೆ, ಈವರೆಗೆ ಬಂದ ದಾರಿಯಲ್ಲಿನ ಪಾಠಗಳಲ್ಲೇ ಆ ಕುರಿತ ಮಾರ್ಗದರ್ಶನವಿದೆ ಎಂಬುದಾಗಿ ನಂಬಿದ್ದೇನೆ. ಈವರೆಗೆ ಬಂದ ದಾರಿಯ ಜಾಡನ್ನು ಕೂಲಂಕಷವಾಗಿ ಅವಲೋಕಿಸಲೇ ಬೇಕಾಗಿದೆ, ಆ ಪ್ರಯತ್ನದಲ್ಲಿ ನನ್ನ ಸುತ್ತಲಿನ ಪ್ರಪಂಚದ ಎಲ್ಲಾ ಆಟಗಾರರನ್ನು ಸೇರಿಸಿಕೊಳ್ಳ ಬೇಕಾಗಿದೆ. ಈ ಲೇಖನಮಾಲೆಯು ಅಂತಹ ಅನೇಕ ಆಟಗಾರರಲ್ಲಿ ಬೀದಿ ನಾಯಿಗಳೊಂದಿಗೆ ಬಂದ ದಾರಿಯನ್ನು ಮಾತ್ರ ನೆನಪಿಸಿಕೊಂಡು ಹಳೇ ಅರ್ಥಗಳ ಮನನದೊಂದಿಗೆ ಹೊಸ ಅರ್ಥಗಳ ಸಾಧ್ಯತೆಯನ್ನೂ ನನಗೆ ಕೊಡಬಲ್ಲದೆಂಬ ನಂಬಿಕೆಯೂ ಇದೆ.

ಎಲಾ ಇವನ, ಬೀದಿ ನಾಯಿಗಳ ಕುರಿತಾಗಿ ಬರೆಯುತ್ತೇನೆ ಎಂದವ ತತ್ವಜ್ಞಾನದ ಬಿಸಿ ಬಾಣಾಲೆಯಲ್ಲಿ ಹಾಕಿ ಮುಗುಚಿ ಮುಗುಚಿ ಹದಮೀರಿ ಸುಡುತ್ತಿದ್ದಾನಲ್ಲ ಈ ಬಡ್ಡೀಮಗ ಎಂದೆನಿಸಬಹುದು ನಿಮಗೆ. ಈ ಅರ್ಥಹೀನ ಹವ್ಯಾಸಗಳ ಹಿಂದೆ ಮಾನವ ಅಭಿವ್ಯಕ್ತಿಗಳ ಹಿಂದಿನ ಅರ್ಥಗಳನ್ನು ಹೆಚ್ಚಿಸುವ ಹಾಗೂ ವಿಮೋಚನೆಗಳ ದಾರಿಗಳ ದುರ್ಗಮತೆಯನ್ನೂ ಇಳಿಸುವ ಆಶಯಗಳಿವೆ ಎಂಬುದಾಕ್ಕಾಗಿಯೇ ಆ ಕಡೆ ಸ್ವಲ್ಪ ಎಲ್ಲೆ ಮೀರಿಯೇ ಎಳೆದೆ, ಕ್ಷಮೆ ಇರಲಿ.

ಮುಂದಿನ ಕಂತಿನಲ್ಲಿ, ನಾನೂ ಹಾಗೂ ನನ್ನ ಕಾರಿನಲ್ಲಿನ ಸಹ ಪ್ರಯಾಣಿಕರು ಬೀದಿ ನಾಯಿಗಳನ್ನು ಗಮ್ಮತ್ತಿನಲ್ಲಿ ಗಮನಿಸುತ್ತಾ ನಗರ ಸಂಚಾರದ ಜಂಜಡದಲ್ಲಿ ನಮ್ಮ ಮಜವನ್ನು ಸುಲಭದಲ್ಲಿ ಹೆಚ್ಚಿಸಿದ ಕಥೆ ಹೇಳುವೆ.

ನಮಸ್ತೆ
ನಟರಾಜ ಉಪಾಧ್ಯ