Monday, August 22, 2016

ಅಭಿನವದಲ್ಲಿ ಮೋಹಿಸಿದ ಮೋಹಮೇನಕೆ


ಕೆರೆಹೊ೦ಡ ದಿವಾಕರ ಹೆಗಡೆಯವರ ಸ೦ವಾದ ಸಹಿತವಾದ ಸುಂದರ ಪ್ರಸ೦ಗವಾದ "ಮೋಹಮೇನಕೆ" ಯು ಮ೦ಟಪ ಪ್ರಭಾಕರ ಉಪಾಧ್ಯ ಮತ್ತು ಅನ೦ತಪದ್ಮನಾಭ ಪಾಠಕ್ ಇವರ ಜ೦ಟಿ ನಿರ್ದೇಶನದಲ್ಲಿ ೭೫ ಪ್ರದರ್ಶನಗಳಾಗಿ, ೭೬ನೇ ಪ್ರಯೋಗವು ವಿಶೇಷವಾಗಿ ನಿಯೋಜಿತವಾಯಿತು.


ಅ೦ತರರಾಷ್ಟ್ರೀಯ ಹೆಸರಿನ ಕಥಕ್ ನೃತ್ಯದ ಜೋಡಿ ನಿರುಪಮಾ ಮತ್ತು ರಾಜೇ೦ದ್ರರ ತ೦ಡದ ವಿದ್ಯಾರ್ಥಿಗಳ ಗರಡಿಯೇ ಬಸವನಗುಡಿಯ ಅಭಿನವ ಸ್ಟುಡಿಯೋ. ನಿರ೦ತರವಾಗಿ ತಮ್ಮ ತಂಡ ಮತ್ತು ಶಿಷ್ಯವರ್ಗದವರಿಗೆ ನಾಟ್ಯ ಕಲೆ ಮತ್ತು ಸ೦ಬ೦ಧಿತ ಎಲ್ಲಾ ವಿಷಯಗಳ ಸುತ್ತಮುತ್ತ  ಆಗಾಗ ಕಮ್ಮಟ ಮತ್ತು ಕಾರ್ಯಕ್ರಮಗಳನ್ನು ನಿಯೋಜಿಸುವವರು ಕಲೆಗೆ ಮುಡಿಪಾಗಿರುವ ನಿರುಪಮಾ ಮತ್ತು ರಾಜೇಂದ್ರ. ಅಗಸ್ಟ್ ೨೧, ೨೦೧೬ರ ಭಾನುವಾರದ ಸ೦ಜೆಯನ್ನು  ಮೋಹ ಮೇನಕೆಗೆ ಮೀಸಲಾಗಿಟ್ಟಿದ್ದರು.

ನಿರುಪಮಾ ರಾಜೇ೦ದ್ರರು ಕಾರ್ಯಕ್ರಮದ ನಿರ್ವಾಹಕರಾಗಿದ್ದರು, ಶತಾವಧಾನಿ ಡಾ. ಅರ್. ಗಣೇಶರು ಅಧ್ಯಕ್ಷ ಸ್ಥಾನದಲ್ಲಿ ಕಾರ್ಯಕ್ರಮದ ಮೊದಲು ಅಖ್ಯಾನದ ಚೌಕಟ್ಟಿನ ಕುರಿತು ಮಾತನಾಡಿ ಕಾರ್ಯಕ್ರಮದ ನಂತರ ಕಲಾವಿದರ ಪುರಸ್ಕಾರವನ್ನು ನಡೆಸಿಕೊಟ್ಟರು. ರಾಜೇ೦ದ್ರ ಅವರು ಎ೦ದಿನ೦ತೆ ರಂಗದ ಮೇಲೆ ಮತ್ತು ಹಿಂದೆ ತಮ್ಮ ಕೈಚೈಳಕಗಳಿ೦ದ ಪ್ರದರ್ಶನದ ವ್ಯವಸ್ಥೆಗೆ ರೂವಾರಿಯಾಗಿದ್ದರು. ಕೊನೆಯಲ್ಲಿ ಪ್ರಭಾತ್ ಕಲಾವಿದರು ಸ೦ಸ್ಥೆಯ ಹಿರಿಯರಾದ ರಾಮು ಅವರು ಶುಭನುಡಿಗಳನ್ನಾಡಿದರು.

ಹಿಮ್ಮೇಳದಲ್ಲಿ ಅನ೦ತಪದ್ಮನಾಭ ಪಾಠಕರು ಭಾಗವತರಾಗಿ, ಕೂಡ್ಲು ದೇವದಾಸ್ ರಾವ್ ಮೃದ೦ಗದಲ್ಲಿ ಗುರುರಾಜ ಐತಾಳ್ ಅವರು ಚೆ೦ಡೆಯಲ್ಲಿ ಮುನ್ನಡೆಸಿದರು. ಚೌಕಿಯ ಕೈಚಳಕದಲ್ಲಿ ಕೋಟ ರಾಜಶೇಖರ ಹ೦ದೆಯವರು ಸಹಕರಿಸಿದರು.


ಮುಮ್ಮೇಳದಲ್ಲಿ ಪ್ರಶಾ೦ತ್ ಹೆಗಡೆ ವಿಶ್ವಾಮಿತ್ರನಾಗಿ, ಮ೦ಟಪ ಪ್ರಭಾಕರ ಉಪಾಧ್ಯ ಮೇನಕೆಯಾಗಿ, ಪ್ರಮದಾ ಆದಿತ್ಯ ವಸ೦ತನಾಗಿ, ಹವ್ಯಕ ಮ೦ಜು ಮನ್ಮಥ, ನಾರದ ಮತ್ತು ಕಣ್ವ ಮುನಿಯಾಗಿ ರ೦ಜಿಸಿದರು.


ಮೋಹಮೇನಕೆ ಅಖ್ಯಾನದ ನಂತರ ಮಂಗಳವಾಗಿ "ರ೦ಗನಾಯಕ ರಾಜೀವಲೋಚನ" ಎ೦ಬ ದಾಸರ ಪದವನ್ನು ನಾಟ್ಯಕಲೆಯ ವಿದ್ಯಾರ್ಥಿಗಳಿಗಾಗಿ ಅಭಿನಯದ ಒ೦ದು ಮಾದರಿಯಾಗಿ ಅಭಿನಯಿಸಿದರು.

ಕೊನೆಯಲ್ಲಿ ನಿರುಪಮಾ ಮತ್ತು ರಾಜೇ೦ದ್ರರು ಡಾ. ಗಣೇಶರ ಮೂಲಕ ಕಲಾವಿದರನ್ನು ಗೌರವಿಸಿದರು.



ಕಾರ್ಯಕ್ರಮದ ಚಿತ್ರನೋಟಗಳು ಮುಖ ಪುಸ್ತಿಕೆಯಲ್ಲಿ:
ಮೋಹ ಮೇನಕೆ ಚಿತ್ರಾವಳಿ - ಭಾಗ ೧

ಮೋಹ ಮೇನಕೆ ಚಿತ್ರಾವಳಿ - ಭಾಗ ೨

ಮೋಹ ಮೇನಕೆ ಚಿತ್ರಾವಳಿ - ಭಾಗ ೩

ಮೋಹ ಮೇನಕೆ ಚಿತ್ರಾವಳಿ - ಭಾಗ ೪

ಮೋಹ ಮೇನಕೆ ಚಿತ್ರಾವಳಿ - ಭಾಗ ೫

ಮೋಹ ಮೇನಕೆ ಚಿತ್ರಾವಳಿ - ಭಾಗ ೬

ಮೋಹಮೆನಕೆ ಚಿತ್ರಾವಳಿ - ಭಾಗ 7


ಕಾರಕ್ರಮದ ದ್ರಶ್ಯ ನೋಟಗಳು ಯೂಟ್ಯೂಬಿನಲ್ಲಿ:

ಅಭಿನವದಲ್ಲಿ ಮೋಹ ಮೇನಕೆಯ ದೃಶ್ಯಾವಳಿ


Saturday, June 11, 2016

ಮಕ್ಕಳಿಗೆ ಗಿಡ, ಮಣ್ಣು, ತೋಟಗಳ ಕುರಿತು ಹುಚ್ಚು ಹಿಡಿಸುವ ಚಿಣ್ಣರ ಕೈತೋಟ


ಮಕ್ಕಳಿಗೆ ಗಿಡ, ಮಣ್ಣು, ತೋಟಗಳ ಕುರಿತು ಹುಚ್ಚು ಹಿಡಿಸುವ ಚಿಣ್ಣರ ಕೈತೋಟ

ನಗರದಲ್ಲಿ ಬೆಳೆವ ಮಕ್ಕಳಿಗೆ ನಿಸರ್ಗದ ಸಂಪರ್ಕ ಸಿಗುವುದು ಸುಲಭವಲ್ಲ, ಅದರಲ್ಲೂ ಮಣ್ಣು, ಗಿಡ,  ಕೀಟ, ಗೊಬ್ಬರಗಳ ಅನುಭವ ಇನ್ನೂ ಕಷ್ಟ. ಕೈತೋಟವಿರದ ಮನೆಯ ಮಕ್ಕಳಿಗೆ, ತರಕಾರಿ ಹಣ್ಣುಗಳು ಮಾರುಕಟ್ಟೆಯಿಂದ ಬರುತ್ತವೆ ಎಂದು ತಿಳಿಯುವುದೇ ಅನಿವಾರ್ಯ!
ಶಿಬಿರಕ್ಕೆ ಮಕ್ಕಳು ಒಳಬರುವ ಮುನ್ನ ಅವರ ಉತ್ಸಾಹವನ್ನು ಸರಿದೂಗಿಸುವಂತೆ ಉತ್ಸುಕರಾಗಿರುವ ವೈಜಂಯಂತಿ ಮಾಡಭುಶಿ ಮತ್ತು ಮೀನಾ ಕೊಳ್ಳ

ಈ ನಿಟ್ಟಿನಲ್ಲಿ ನಾಲ್ಕು ತಾರಸಿ ತೋಟದ ಮಹಿಳೆಯರು ಒಂದಾಗಿ ತಮ್ಮ ತಾರಸಿ ತೋಟದ ಅನುಭವ ತಮ್ಮ ಕುಟುಂಬದ ಚಿಣ್ಣಾರಿಗಳಿಗೆ ಸಿಕ್ಕಿದಂತೆ ಬೇರೆಯವರ ಮಕ್ಕಳಿಗೂ ಸಿಗಬೇಕೆಂದು ಹೊಮ್ಮಿಕೊಂಡ ಕಾರ್ಯಕ್ರಮವೇ "ಚಿಣ್ಣರ ಕೈತೋಟ".


ಮಕ್ಕಳಿಗೆ ಎರೆಹುಳವನ್ನು ಕೈಗೆತ್ತಿಕೊಳ್ಳುವತ್ತ ಹುರಿದುಂಬಿಸುತ್ತಿರುವ ವೈಜಯಂತಿ ಮಾಡಭುಶಿ ಮತ್ತು ವಿಜಯಲಕ್ಶ್ಮಿ ಶ್ರೀನಿವಾಸ್.




ಪ್ರತೀ ಮೂರು ತಿಂಗಳಿಗೆ ಒಮ್ಮೆ ನಡೆಯುವ "ಊಟ ಫ್ರಾಮ್ ಯುವರ್ ತೋಟ" ಶಹರಿನ ಸಂತೆಯಲ್ಲಿ ಈ "ಚಿಣ್ಣರ ಕೈತೋಟ" ಕಾರ್ಯಕ್ರಮವು ಉಚಿತವಾಗಿ ಎರಡು ಬಾರಿ ನಡೆಯುವುದು (ಬೆಳಿಗ್ಗೆ ಮತ್ತು ಮಧ್ಯಾಹ್ನದ ಶಿಬಿರಗಳು) ಸಂತೆಯ ಹೆಗ್ಗಳಿಕೆಯ ಅಂಶವೂ ಹೌದು, ಅದರಲ್ಲಿ ಭಾಗವಹಿಸುವ ಮಕ್ಕಳ ಮತ್ತು ಅವರ ಪೋಷಕರ ಸಂಭ್ರಮದ ವಿಷಯವೂ ಹೌದು.

ತೋಟಗಾರಿಕೆಯ ಮೂಲಭೂತ ಅಂಶಗಳನ್ನು ತಿಳಿಹೇಳುವಲ್ಲಿ ಸಹಕರಿಸುವ ಮಾದರಿಗಳು

ಸುಮಾರು ಒಂದೂವರೆ ಗಂಟೆ ಕಾಲ ನಡೆಯುವ ಈ ಶಿಬಿರದಲ್ಲಿ ೫೦-೬೦ ಮಕ್ಕಳು ಒಮ್ಮೆಲೇ ಭಾಗವಹಿಸಲು ಸಾಧ್ಯವಿರುತ್ತದೆ. ಈ ಶಿಬಿರವನ್ನು ನಡೆಸುವ ನಾಲ್ಕು ಮಹಿಳೆಯರೂ ನೇರವಾಗಿ ಮಕ್ಕಳೊಂದಿಗೆ ಸಂವಾದವನ್ನಿಟ್ಟುಕೊಂಡು ಅವರ ಕುತೂಹಲ, ಜ್ನಾನ, ಆಸಕ್ತಿ ಮತ್ತು ತೊಡಗಿಕೊಳ್ಳುವಿಕೆಯನ್ನು ಮೇಲೆತ್ತುತ್ತಾರೆ. ಸಸ್ಯ, ಬೀಜ, ಮರ, ಹಣ್ಣು, ತರಕಾರಿ, ಗೊಬ್ಬರ, ಎರೆಹುಳು, ಕೀಟ ಹೀಗೆ ನಿಸರ್ಗದತ್ತವಾದ ಈ ಭಾಗ್ಯಗಳನ್ನು ಅವರಿಗೆ ಚಿತ್ರಗಳ ಮೂಲಕ ಅವರಿಗೆ ಪರಿಚಯಿಸುತ್ತಾ ಅದರ ಸುತ್ತಲಿನ ಸಾವಯವ ತೋಟಗಾರಿಕೆಯ ಸಾಧ್ಯತೆಯನ್ನು ಪರಿಚಯಿಸುತ್ತಾರೆ. ಅಂತಹ ಕಾಯಕವು ಅವರ ಮನೆಯ ಬಾಲ್ಕನಿ ಮತ್ತು ತಾರಸಿಯ ಮೇಲೆ ಮಾಡುವುದು ಎಷ್ಟು ಸುಲಭ ಎಂದು ತೋರಿಸಿಕೊಡುತ್ತಾರೆ. ಎರೆ ಹುಳು, ಗಿಡ, ಮಣ್ಣು, ಗೊಬ್ಬರಗಳನ್ನು ಮಕ್ಕಳು ಕೈಗೆತ್ತಿಕೊಂಡು ಅದರ ನೇರ ಅನುಭವವನ್ನು ಅವರಿಗಿತ್ತುತ್ತಾರೆ. ಈ ಅನುಭವಗಳ ಸುತ್ತಲಿನ ಅವರ ಕಲ್ಪನೆಗಳನ್ನು ಗರಿಗೆದರಿಸಿತ್ತಾರೆ.

ಮಕ್ಕಳಿಗೆ ಹಂಚುವ ಮುನ್ನ ಗಿಡಗಳ ಸಿದ್ಧತೆಯನ್ನು ಪರಿಶೀಲಿಸುತ್ತಿರುವ ರಶ್ಮಿ ಸತ್ಯ

ಕೊನೆಯಲ್ಲಿ, ತಾವು ಕಲಿತಾ ಪಾಠದ ಸುತ್ತ ತಾರಸಿ ತೋಟಗಾರಿಕೆಯನ್ನು ಅವರೇ ನಡೆಸುವಂತೆ ಅವರಿಗೆ ಕುಂಡ, ಮಣ್ಣು, ತರಕಾರಿ ಬರುವ ಗಿಡಗಳನ್ನಿತ್ತು ಅವರು ಮನೆಯಲ್ಲಿ ತಾರಸಿತೋಟವನ್ನು ಪ್ರಾರಂಭಿಸುವ ಇಲ್ಲಾ ಮುನ್ನಡೆಸುವ ಪ್ರಕ್ರಿಯೆಗೆ ನಾಂದಿ ಬೆಳಗುತ್ತಾರೆ. ಮಕ್ಕಳ ಅನುಭವ, ಆಸೆ, ಆಸಕ್ತಿಯ ಸುತ್ತ ಪೋಷಕರೂ ಸ್ಪಂದಿಸಿ ತಾರಸಿಯ ತೋಟದ ಬದುಕಿನ ಕ್ರಮ ಮನೆಯಲ್ಲಿ ಗಟ್ಟಿಯಾಗಿ ತಳವೂರುತ್ತದೆ. ಮಕ್ಕಳು ಕಂಡುಹೋದ ಗಿಡದಲ್ಲಿ ಬದನೆ, ಮೆಣಸು, ತೋಮೇಟೋ, ಸೊಪ್ಪು ಇತ್ಯಾದಿಗಳು ಬೆಳೆದು ನಿಂತಾಗ ಅದರ ಚಿತ್ರಗಳನ್ನು ಸಾಮಾಜಿಕ ತಾಣದಲ್ಲಿ ಬಿತ್ತರಿಸಿ ಮಕ್ಕಳು ಮತ್ತು ಪೋಷಕರು ಸಂಭ್ರಮಿಸುತ್ತಾರೆ.

ಗಿಡವನ್ನು ಪಡೆದ ಮಗು ತೆರಳುವ ಮುನ್ನ ಅದರ ಸಂಭ್ರಮದ ಸಂವಾದದಲ್ಲಿ ಭಾಗಿಯಾಗಿರುವ ರಶ್ಮಿ ಸತ್ಯ, ವಿಜಯಲಕ್ಶ್ಮಿ ಶ್ರೀನಿವಾಸ್ ಮತ್ತು ವೈಜಯಂತಿ ಮಾಡಭುಶಿ



ಚಿಣ್ಣರ ಕೈತೋಟದಲ್ಲಿ ಚಿತ್ರಸ್ಪರ್ಧೆ ನಡೆದಾಗ ಮೂಡಿಬಂದ ಚಿತ್ರಗಳಲ್ಲೊಂದು
ಚಿತ್ರಗಳನ್ನುಪಯೋಗಿಸಿ ತೋಟಗಾರಿಕೆಯ ಮೂಲಭೂತ ಸತ್ಯಗಳ ಸುತ್ತಲಿನ ಸಂವಾದದಲ್ಲಿ ವೈಜಯಂತಿ ಮಾಡಭುಶಿ

ಇಂದು ಜೂನ್ ೧೨ ಭಾನುವಾರ, ಬನಶಂಕರಿ ಒಂದನೇ ಹಂತದಲ್ಲಿ ನಡೆಯುತ್ತಿರುವ ೧೭ನೇ "ಊಟ ಫ್ರಾಮ್ ಯುವರ್ ತೋಟ"ದ ಸಂತೆಯಲ್ಲಿ ಚಿಣ್ಣರು ಕೈತೋಟದ ಕುರಿತಾಗಿ ಮತ್ತೆ ನಲಿಯಲಿದ್ದಾರೆ. ಶಿಬಿರಕ್ಕೆ ನೋಂದಣಿಯ ಮಿತಿ ಮೀರಿ ಹಲವು ಚಿಣ್ಣರು ಮುಂದಿನ ಮೂರು ತಿಂಗಳ ನಂತರದ ಅವಕಾಶಕ್ಕಾಗಿ ನಿರೀಕ್ಷಿಸಬೇಕಾದ ಪ್ರಮೇಯ ಬರಲಿದೆ.


Friday, June 10, 2016

ನಗರದಿ ನಮ್ಮಯ ತೋಟದಿಂದಲೇ ಊಟವ ಉದಿಸುವ ಕನಸಿನ ಸುತ್ತ...


ಪೋಷಕರ ಸಾವಯವ ತೋಟದ ಆಟದಲ್ಲಿ ಸಂಭ್ರಮಿಸುವ ಗಿರಿನಗರದ ಬಾಲೆ ಹರ್ಷಿತಾ
ತೋಟದ ನಗರವೆಂದೇ ಮನೆಮಾತಾಗಿದ್ದ ಬೆಂಗಳೂರು ಕೃಮೇಣ ತಿಪ್ಪೆಗುಂಡಿ ಎನಿಸಿಕೊಳ್ಳುವವರೆಗೆ ಇಳಿದು ಬಂದರೂ ಈ ನಗರದಲ್ಲಿ ಇನ್ನೂ ಸಾಕಷ್ಟು ಹಸಿರು ಇದೆ, ಹಸಿರನ್ನು ಇಷ್ಟ ಪಡುವ ತೋಟಗಾರರು ಸಾಕಷ್ಟು ಮಂದಿ ಇದ್ದಾರೆ. ಯಾಂತ್ರಿಕತೆ, ಜಂಜಡ, ಪರಿಸರ ಮಾಲಿನ್ಯಗಳಿಂದ ರೋಸಿಹೋದ ನಾಗರಿಕರೆಷ್ಟೋ ಮಂದಿ ಹಸಿರು, ತಾಳಿಕೊಳ್ಳಬಲ್ಲ ಬದುಕು, ಸಾವಯವ ಆಹಾರ ಇತ್ಯಾದಿಗಳ ಮೂಲಕ ತಮ್ಮ ವೈಯಕ್ತಿಕ ಬದುಕಿನಲ್ಲಿ ಮತ್ತೆ ಚೇತನವನ್ನು ತುಂಬಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ.
ತಾರಸಿಯ ಮೇಲೆ ದಿನದಿನದಿಂದ ದಿನಕ್ಕೆ ಹಿಗ್ಗುವ ಚಂದ್ರನಂತೆ ಬೆಳೆಯುತ್ತಿರುವ ಸಿಹಿಗುಂಬಳ

ಈ ನಿಟ್ಟಿನಲ್ಲಿ ನಿಮ್ಮ ತೋಟದಿಂದಲೇ ಊಟವ ಮಾಡಿ ಎಂಬ ಘೋಷಣೆಯಲ್ಲಿ ಹೊರಟವರು "ಗಾರ್ಡನ್ ಸಿಟಿ ಫಾರ್ಮರ್ಸ್" ಎಂಬ ಸಂಸ್ಥೆಯವರು. ಡಾ. ವಿಶ್ವನಾಥ ಕಡೂರು ಸಂಸ್ಥಾಪಿಸಿದ ಈ ಸಂಸ್ಥೆ  ಈ ಕುರಿತು "ಊಟ From Your ತೋಟ" ಎಂಬ ಶಹರಿನ ಸಂತೆಯನ್ನು ನಗರದ ಬೇರೆ ಬೇರೆ ಮೂಲೆಗಳಲ್ಲಿ ಮೂರು ತಿಂಗಳಿಗೊಮ್ಮೆ ನಡೆಸುತ್ತಲೇ ಬಂದಿದೆ. ಈ ಬಾರಿ ೧೭ನೇ ಅಂತಹ ಸಂತೆಯು, ಬನಶಂಕರಿ ಮೊದಲನೇ ಹಂತದ ಶಂಕರನಾಗ ವೃತ್ತದ ಪಕ್ಕದ ಡೊಂಕಲ ಮೈದಾನದಲ್ಲಿ ಜೂನ್ ೧೨ ಭಾನುವಾರ, ಬೆಳಿಗ್ಗೆ ೧೦ರಿಂದ ಸಂಜೆ ೫ರ ತನಕ ಜರುಗಲಿದೆ.

೪೦ಕ್ಕೂ ಹೆಚ್ಚಿನ ಮಾರಾಟ ಮತ್ತು ಪ್ರದರ್ಶನ ಮಳಿಗೆಗಳು ಈ ಸಂತೆಯಲ್ಲಿ ಇರುತ್ತವೆ. ಸಾವಯವ ತೋಟಗಾರಿಕೆ, ತಾಳಿಕೊಳ್ಳಬಲ್ಲ ಬದುಕಿನ ಸುತ್ತಲಿನ ಆಹಾರ ಮತ್ತು ಜೀವನಕ್ರಮ ಇತ್ಯಾದಿಗಳು ಸೇರಿ ವಿಧವಿಧದ ಸಣ್ಣ ಹಿಡುವಳಿದಾರರ ಅಂಗಡಿಗಳನ್ನು ನೋಡುವುದೇ ಕಣ್ಣಿಗೆ ತಂಪು, ಜೊತೆಗೆ ಗಿಡ, ಬೀಜ, ಗೊಬ್ಬರ, ನವಣೆ, ಕುರುಕುಲು, ಕಸೂತಿ ಇತ್ಯಾದಿ ಇತ್ಯಾದಿಗಳನ್ನು ಕೊಳ್ಳುವವರೂ ಸಾಕಷ್ಟು ಮಂದಿ ಬರುತ್ತಾರೆ. ಸಾವಯವ ರೀತಿಯ ತಿಂಡಿ ಊಟಗಳ ತಯಾರಿ ಮತ್ತು ಮಾರಾಟವೂ ಇರುತ್ತದೆ.

ಪ್ರತೀ ಬಾರಿಯಂತೆ ಆದರ್ಶಪ್ರಾಯ ಗ್ರಾಮಾಂತರ ಸಾವಯವ ರೈತರೊಬ್ಬರಿಗೆ ಸನ್ಮಾನವಿರುತ್ತದೆ. "ಕಸದಿಂದ ರಸ" ಅಭಿಯಾನದ ಪ್ರದರ್ಶನ ಮತ್ತು ಪಾಠವಿರುತ್ತದೆ. ಚಿಣ್ಣರ ಕೈತೋಟ, ಸಾವಯವ ಗೊಬ್ಬರ ತಯಾರಿಯ ಕುರಿತಾದ ಉಚಿತ ತರಗತಿಗಳು, ಸಾವಯವ ತಾರಸಿ ತೋಟಗಾರಿಕೆಯ ಸುತ್ತ ಉಚಿತ ಸಲಹೆ, ಬೆಂಗಳೂರಿನ ಸಾವಯವ ತಾರಸಿ ತೋಟಗಾರರಿಂದ ಬೀಜ, ಗಿಡ ಮತ್ತು ಬೆಳೆಗಳ ಉಚಿತ ವಿತರಣೆ ಇತ್ಯಾದಿಗಳ ಮೂಲಕ ಹೆಚ್ಚಿನ ಸಂಖೆಯಲ್ಲಿ ಹೊಸಬರಾದ ಸಾವಯವ ತಾರಸಿ ತೋಟದವರನ್ನು ಆಕರ್ಷಿಸಲು ಪ್ರಾಮಾಣಿಕ ಪ್ರಯತ್ನವು ಎಂದಿನಂತೆ ನಡೆಯಲಿದೆ. ಈ ನಿಟ್ಟಿನಲ್ಲಿ ನಗರದ ಬೇರೆ ಬೇರೆ ಮೂಲೆಗಳಲ್ಲಿರುವ ಸ್ಥಳೀಯ ತಾರಸಿ ತೋಟಗಾರರ ಗುಂಪುಗಳು ಹೆಚ್ಚಿನ ಮಟ್ಟದ ಸ್ವಯಂಸೇವೆಯಲ್ಲಿ ಈ ಬಾರಿ ತೊಡಗಿಸಿಕೊಳ್ಳುತ್ತಿವೆ. ಇಲ್ಲಿಗೆ ಸ್ಥಳೀಯವಾದ ಬಸವನಗುಡಿ ಸಾವಯವ ತೋಟಗಾರರ ತಂಡ ಈ ಕುರಿತು ಮುಂಚೂಣಿಯಲ್ಲಿದೆ.





ಕಾಂಕ್ರೀಟ ಕಾಡಾಗಿ ಹೋದ ಬೆಂಗಳೂರಿನ ತಾರಸಿ ಮೇಲೆ ಎಲ್ಲರೂ ತೋಟವ ಮಾಡಿದರೆ ಬೆಂಗಳೂರು ಮತ್ತೆ ನಂದನವನವಾಗಿ ಕಂಗೊಳಿಸುತ್ತದೆ. ಅಲ್ಲದೇ ಆ ತೋಟದಿಂದ ಬಂದ ಬೆಳೆಯಲ್ಲೇ ಊಟವ ಮಾಡಿದರೆ ಆರೋಗ್ಯ, ನೆಮ್ಮದಿ, ಸಂತೋಷ, ತೃಪ್ತಿ ಹೆಚ್ಚುತ್ತದೆ. ಅಲ್ಲದೇ ಈ ತಾರಸಿ ತೋಟಗಾರರ ಸುತ್ತಲಿನ ಅಂತರ್ಜಾಲದ ಸಾಮಾಜಿಕ ತಾಣಗಳ ಮೂಲಕ ಹೊಸ ಸ್ನೇಹ ಸಂಬಂಧಗಳು, ಅಭಿವ್ಯಕ್ತಿಗಳು ಮತ್ತು ಸಂಭ್ರಮದ ಹಬ್ಬಗಳ ಆಚರಣೆಯಲ್ಲಿ ಜಡ್ಡುಗಟ್ಟಿದ ಬದುಕಿಗೆ ಹೊಸ ಧನಾತ್ಮಕ ಚಾಲನೆ ಸಿಗಲಿದೆ. ನಿಸರ್ಗ ಮತ್ತು ನಾಗರಿಕತೆಯ ಬದುಕನ್ನು ಸಮತೋಲನವಿಟ್ಟುಕೊಳ್ಳುವ ಕಲೆ ಕರತಲಾಮಲಕವಾಗುತ್ತದೆ.
ಸಾವಿರಕ್ಕೂ ಮೀರಿ ಸ್ಟ್ರಾಬೆರಿ ಗಿಡಗಳನ್ನು ಗಿರಿನಗರದ ಮನೆಯ ಮೇಲಿನ ತಾರಸಿಯಲ್ಲಿ ಬೆಳೆಸಿ ಬೆಂಗಳೂರಿನ ಮೂಲೆಮಲೆಗೆ ಹಂಚುವ ಸಂತಸದಲ್ಲಿ ಅಂಬಾ ಶ್ರೀಕಾಂತ್

ತಾರಸಿಯ ತೋಟ ಮಾಡುವುದು ಮಕ್ಕಳಾಟವಿದ್ದಂತೆ. ನಂಬಿಕೆಯಿಲ್ಲವೇ?! ಭಾನುವಾರ ಈ ಸಂತೆಗೆ ಬಂದು ನೋಡಿ, ಕೇಳಿ, ಮಾತಾಡಿ. ಈ ತಾರಸಿ ತೋಟದವರ ಸಂತಸದ ಸಂಭ್ರಮದ ಹಿಂದಿನ ಸರಳ ಸತ್ಯಗಳನೇಂಬ ನಿಗೂಢವನ್ನು ನೀವೇ ಬೇಧಿಸುವ ಆಟಕ್ಕೆ ಇಳಿಯಲು ಬನ್ನಿ, ನಿಮ್ಮವರನ್ನು ಕರೆತನ್ನಿ.

ತಾರಸಿಯಿಂದಲೇ ಬಂದ ಬೆಳೆಯಲ್ಲೇ  ಹೆಚ್ಚುಕಡಿಮೆ ನೂರು ಪ್ರತಿಶತ: ಊಟ ಮಾಡಿ ತೋರಿಸಿದ ಯಶಸ್ಸಿನ ನಂತರ ೧೮೦ ಕಿ.ಮಿ. ದೂರದ ಹಳ್ಳಿಯಲ್ಲಿ ಹೊಲಗಳನ್ನು ಖರೀದಿಸಿ ತೋಟಗಾರಿಕೆ ಮಾಡುತ್ತಾ ಆಗಾಗ ತಾರಸಿ ತೋಟಗಾರರ ಕೂಟದಲ್ಲಿ ಸಸಿ, ಸಗಣಿ ಮತ್ತು ಸಂತೋಷವನ್ನು ಹಂಚುತ್ತಲೇ ಬಂದಿರುವ ಗವಿಪುರದ ಅರುಣಾ ಮಳಗಿ


ಮುಖಪುಸ್ತಿಕೆಯಲ್ಲಿನ ಬೆಂಗಳೂರಿನ ತಾರಸಿತೋಟದವರು ಸೇರಿಕೊಂಡಿರುವ ಸಮೂಹಗಳಲ್ಲಿ ಕೆಲವು:













ಕತ್ರಿಗುಪ್ಪೆಯಲ್ಲಿ ತಾರಸಿ ಮೇಲೆ ತೋಟ ಸಾಕಾಗದೆಂದು ಕಾಡು ಮಾಡ ಹೊರಟ ತಾರಸಿ ತೋಟಿಗರೊಬ್ಬರು!

ಊಟ From Your ತೋಟ ಅಭಿಯಾನ ಪ್ರಾರಂಭವಾದಾಗ ಬಂದ ಪತ್ರಿಕೆಯಲ್ಲಿನ ಲೇಖನದ ಸೊಲ್ಲು: