ಮಕ್ಕಳಿಗೆ ಗಿಡ, ಮಣ್ಣು, ತೋಟಗಳ ಕುರಿತು ಹುಚ್ಚು ಹಿಡಿಸುವ ಚಿಣ್ಣರ ಕೈತೋಟ
ನಗರದಲ್ಲಿ ಬೆಳೆವ ಮಕ್ಕಳಿಗೆ ನಿಸರ್ಗದ ಸಂಪರ್ಕ ಸಿಗುವುದು ಸುಲಭವಲ್ಲ, ಅದರಲ್ಲೂ ಮಣ್ಣು, ಗಿಡ, ಕೀಟ, ಗೊಬ್ಬರಗಳ ಅನುಭವ ಇನ್ನೂ ಕಷ್ಟ. ಕೈತೋಟವಿರದ ಮನೆಯ ಮಕ್ಕಳಿಗೆ, ತರಕಾರಿ ಹಣ್ಣುಗಳು ಮಾರುಕಟ್ಟೆಯಿಂದ ಬರುತ್ತವೆ ಎಂದು ತಿಳಿಯುವುದೇ ಅನಿವಾರ್ಯ!
![]() |
| ಶಿಬಿರಕ್ಕೆ ಮಕ್ಕಳು ಒಳಬರುವ ಮುನ್ನ ಅವರ ಉತ್ಸಾಹವನ್ನು ಸರಿದೂಗಿಸುವಂತೆ ಉತ್ಸುಕರಾಗಿರುವ ವೈಜಂಯಂತಿ ಮಾಡಭುಶಿ ಮತ್ತು ಮೀನಾ ಕೊಳ್ಳ |
ಈ ನಿಟ್ಟಿನಲ್ಲಿ ನಾಲ್ಕು ತಾರಸಿ ತೋಟದ ಮಹಿಳೆಯರು ಒಂದಾಗಿ ತಮ್ಮ ತಾರಸಿ ತೋಟದ ಅನುಭವ ತಮ್ಮ ಕುಟುಂಬದ ಚಿಣ್ಣಾರಿಗಳಿಗೆ ಸಿಕ್ಕಿದಂತೆ ಬೇರೆಯವರ ಮಕ್ಕಳಿಗೂ ಸಿಗಬೇಕೆಂದು ಹೊಮ್ಮಿಕೊಂಡ ಕಾರ್ಯಕ್ರಮವೇ "ಚಿಣ್ಣರ ಕೈತೋಟ".
![]() |
| ಮಕ್ಕಳಿಗೆ ಎರೆಹುಳವನ್ನು ಕೈಗೆತ್ತಿಕೊಳ್ಳುವತ್ತ ಹುರಿದುಂಬಿಸುತ್ತಿರುವ ವೈಜಯಂತಿ ಮಾಡಭುಶಿ ಮತ್ತು ವಿಜಯಲಕ್ಶ್ಮಿ ಶ್ರೀನಿವಾಸ್. |
ಪ್ರತೀ ಮೂರು ತಿಂಗಳಿಗೆ ಒಮ್ಮೆ ನಡೆಯುವ "ಊಟ ಫ್ರಾಮ್ ಯುವರ್ ತೋಟ" ಶಹರಿನ ಸಂತೆಯಲ್ಲಿ ಈ "ಚಿಣ್ಣರ ಕೈತೋಟ" ಕಾರ್ಯಕ್ರಮವು ಉಚಿತವಾಗಿ ಎರಡು ಬಾರಿ ನಡೆಯುವುದು (ಬೆಳಿಗ್ಗೆ ಮತ್ತು ಮಧ್ಯಾಹ್ನದ ಶಿಬಿರಗಳು) ಸಂತೆಯ ಹೆಗ್ಗಳಿಕೆಯ ಅಂಶವೂ ಹೌದು, ಅದರಲ್ಲಿ ಭಾಗವಹಿಸುವ ಮಕ್ಕಳ ಮತ್ತು ಅವರ ಪೋಷಕರ ಸಂಭ್ರಮದ ವಿಷಯವೂ ಹೌದು.
![]() |
| ತೋಟಗಾರಿಕೆಯ ಮೂಲಭೂತ ಅಂಶಗಳನ್ನು ತಿಳಿಹೇಳುವಲ್ಲಿ ಸಹಕರಿಸುವ ಮಾದರಿಗಳು |
ಸುಮಾರು ಒಂದೂವರೆ ಗಂಟೆ ಕಾಲ ನಡೆಯುವ ಈ ಶಿಬಿರದಲ್ಲಿ ೫೦-೬೦ ಮಕ್ಕಳು ಒಮ್ಮೆಲೇ ಭಾಗವಹಿಸಲು ಸಾಧ್ಯವಿರುತ್ತದೆ. ಈ ಶಿಬಿರವನ್ನು ನಡೆಸುವ ನಾಲ್ಕು ಮಹಿಳೆಯರೂ ನೇರವಾಗಿ ಮಕ್ಕಳೊಂದಿಗೆ ಸಂವಾದವನ್ನಿಟ್ಟುಕೊಂಡು ಅವರ ಕುತೂಹಲ, ಜ್ನಾನ, ಆಸಕ್ತಿ ಮತ್ತು ತೊಡಗಿಕೊಳ್ಳುವಿಕೆಯನ್ನು ಮೇಲೆತ್ತುತ್ತಾರೆ. ಸಸ್ಯ, ಬೀಜ, ಮರ, ಹಣ್ಣು, ತರಕಾರಿ, ಗೊಬ್ಬರ, ಎರೆಹುಳು, ಕೀಟ ಹೀಗೆ ನಿಸರ್ಗದತ್ತವಾದ ಈ ಭಾಗ್ಯಗಳನ್ನು ಅವರಿಗೆ ಚಿತ್ರಗಳ ಮೂಲಕ ಅವರಿಗೆ ಪರಿಚಯಿಸುತ್ತಾ ಅದರ ಸುತ್ತಲಿನ ಸಾವಯವ ತೋಟಗಾರಿಕೆಯ ಸಾಧ್ಯತೆಯನ್ನು ಪರಿಚಯಿಸುತ್ತಾರೆ. ಅಂತಹ ಕಾಯಕವು ಅವರ ಮನೆಯ ಬಾಲ್ಕನಿ ಮತ್ತು ತಾರಸಿಯ ಮೇಲೆ ಮಾಡುವುದು ಎಷ್ಟು ಸುಲಭ ಎಂದು ತೋರಿಸಿಕೊಡುತ್ತಾರೆ. ಎರೆ ಹುಳು, ಗಿಡ, ಮಣ್ಣು, ಗೊಬ್ಬರಗಳನ್ನು ಮಕ್ಕಳು ಕೈಗೆತ್ತಿಕೊಂಡು ಅದರ ನೇರ ಅನುಭವವನ್ನು ಅವರಿಗಿತ್ತುತ್ತಾರೆ. ಈ ಅನುಭವಗಳ ಸುತ್ತಲಿನ ಅವರ ಕಲ್ಪನೆಗಳನ್ನು ಗರಿಗೆದರಿಸಿತ್ತಾರೆ.
![]() |
| ಮಕ್ಕಳಿಗೆ ಹಂಚುವ ಮುನ್ನ ಗಿಡಗಳ ಸಿದ್ಧತೆಯನ್ನು ಪರಿಶೀಲಿಸುತ್ತಿರುವ ರಶ್ಮಿ ಸತ್ಯ |
ಕೊನೆಯಲ್ಲಿ, ತಾವು ಕಲಿತಾ ಪಾಠದ ಸುತ್ತ ತಾರಸಿ ತೋಟಗಾರಿಕೆಯನ್ನು ಅವರೇ ನಡೆಸುವಂತೆ ಅವರಿಗೆ ಕುಂಡ, ಮಣ್ಣು, ತರಕಾರಿ ಬರುವ ಗಿಡಗಳನ್ನಿತ್ತು ಅವರು ಮನೆಯಲ್ಲಿ ತಾರಸಿತೋಟವನ್ನು ಪ್ರಾರಂಭಿಸುವ ಇಲ್ಲಾ ಮುನ್ನಡೆಸುವ ಪ್ರಕ್ರಿಯೆಗೆ ನಾಂದಿ ಬೆಳಗುತ್ತಾರೆ. ಮಕ್ಕಳ ಅನುಭವ, ಆಸೆ, ಆಸಕ್ತಿಯ ಸುತ್ತ ಪೋಷಕರೂ ಸ್ಪಂದಿಸಿ ತಾರಸಿಯ ತೋಟದ ಬದುಕಿನ ಕ್ರಮ ಮನೆಯಲ್ಲಿ ಗಟ್ಟಿಯಾಗಿ ತಳವೂರುತ್ತದೆ. ಮಕ್ಕಳು ಕಂಡುಹೋದ ಗಿಡದಲ್ಲಿ ಬದನೆ, ಮೆಣಸು, ತೋಮೇಟೋ, ಸೊಪ್ಪು ಇತ್ಯಾದಿಗಳು ಬೆಳೆದು ನಿಂತಾಗ ಅದರ ಚಿತ್ರಗಳನ್ನು ಸಾಮಾಜಿಕ ತಾಣದಲ್ಲಿ ಬಿತ್ತರಿಸಿ ಮಕ್ಕಳು ಮತ್ತು ಪೋಷಕರು ಸಂಭ್ರಮಿಸುತ್ತಾರೆ.
![]() |
| ಗಿಡವನ್ನು ಪಡೆದ ಮಗು ತೆರಳುವ ಮುನ್ನ ಅದರ ಸಂಭ್ರಮದ ಸಂವಾದದಲ್ಲಿ ಭಾಗಿಯಾಗಿರುವ ರಶ್ಮಿ ಸತ್ಯ, ವಿಜಯಲಕ್ಶ್ಮಿ ಶ್ರೀನಿವಾಸ್ ಮತ್ತು ವೈಜಯಂತಿ ಮಾಡಭುಶಿ |
![]() |
| ಚಿಣ್ಣರ ಕೈತೋಟದಲ್ಲಿ ಚಿತ್ರಸ್ಪರ್ಧೆ ನಡೆದಾಗ ಮೂಡಿಬಂದ ಚಿತ್ರಗಳಲ್ಲೊಂದು |
![]() |
| ಚಿತ್ರಗಳನ್ನುಪಯೋಗಿಸಿ ತೋಟಗಾರಿಕೆಯ ಮೂಲಭೂತ ಸತ್ಯಗಳ ಸುತ್ತಲಿನ ಸಂವಾದದಲ್ಲಿ ವೈಜಯಂತಿ ಮಾಡಭುಶಿ |
ಇಂದು ಜೂನ್ ೧೨ ಭಾನುವಾರ, ಬನಶಂಕರಿ ಒಂದನೇ ಹಂತದಲ್ಲಿ ನಡೆಯುತ್ತಿರುವ ೧೭ನೇ "ಊಟ ಫ್ರಾಮ್ ಯುವರ್ ತೋಟ"ದ ಸಂತೆಯಲ್ಲಿ ಚಿಣ್ಣರು ಕೈತೋಟದ ಕುರಿತಾಗಿ ಮತ್ತೆ ನಲಿಯಲಿದ್ದಾರೆ. ಶಿಬಿರಕ್ಕೆ ನೋಂದಣಿಯ ಮಿತಿ ಮೀರಿ ಹಲವು ಚಿಣ್ಣರು ಮುಂದಿನ ಮೂರು ತಿಂಗಳ ನಂತರದ ಅವಕಾಶಕ್ಕಾಗಿ ನಿರೀಕ್ಷಿಸಬೇಕಾದ ಪ್ರಮೇಯ ಬರಲಿದೆ.



















