ಬೆಂಗಳೂರಿನ ಸಾರ್ವಜನಿಕ
ಜೀವನದಲ್ಲಿ ಕಂಡರೂ ಕಾಣಿಸದಂತೆ ಭಾಸವಾಗುವ ಪ್ರಾಣಿ ಪ್ರಪಂಚವೊಂದಿದೆ. ನಾಗರಿಕರ ಜೀವನದೊಂದಿಗೆ ಅವುಗಳ
ಜೀವನವೂ ಮಿಳಿತವಾಗಿದೆ. ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಅವುಗಳ ಅಸ್ತಿತ್ವದ ಪ್ರಪಂಚ ಅನಾವರಣಗೊಳ್ಳುತ್ತಾ
ಹೋಗುತ್ತದೆ. ನಾನು ಕಳೆದ ೨೫ ವರ್ಷಗಳಿಂದ ಈ ಪ್ರಪಂಚವನ್ನು ಗಮನಿಸುತ್ತಲೇ ಬಂದಿದ್ದೇನೆ. ಒಂದೈದು ವರ್ಷ
ಬೀದಿ ಛಾಯಾಗ್ರಹಣ ಮಾಡಿದ್ದೆ. (ಬೀದಿ ಛಾಯಾಗ್ರಹಣದ ಸುತ್ತಲಿನ ಪಾಠಗಳಿಗಾಗಿ ಮುಂದೆ ಬೇರೆಯಾಗಿಯೇ ಬರೆಯುವೆ).
ಬೀದಿಯ ದೃಶ್ಯ ವೈಶಿಷ್ಠ್ಯಗಳ ನಿರ್ಮಾಣದಲ್ಲಿ ಈ ಪ್ರಾಣಿಗಳ ಕರಾಮತ್ತು ಸಾಕಷ್ಟು ಇರುವುದೇ ಛಾಯಾಗ್ರಹಣಕ್ಕೆ
ಉತ್ತೇಜನವನ್ನೇ ಕೊಡುತ್ತಿತ್ತು. ಬೇರೆ ಹವ್ಯಾಸಗಳ ಒತ್ತಡದಲ್ಲಿ ಈ ಬೀದಿ ಛಾಯಾಗ್ರಹಣ ಇತ್ತೀಚೆಗೆ ಪೂರ್ಣ
ಸ್ಥಗಿತಗೊಂಡಿದೆ. ವಾಸ್ತವದ ಗಮನಿಸುವಿಕೆಗೆ ಮಿಗಿಲಾಗಿ ಅದರೊಂದಿಗೆ ನನ್ನ ನೃತ್ಯವನ್ನೇ ಹೆಚ್ಚಿಸುವ
ಉತ್ಸಾಹದಲ್ಲಿ ಬರೇ ಗಮನಿಸುವ ಗಿರವೂ ಅದರ ಸುತ್ತಲಿನ ಕಲಾಭಿವ್ಯಕ್ತಿಯೂ ಕಡಿಮೆಯಾಗುತ್ತಿದೆ.
ಬೆಂಗಳೂರು ಬೀದಿಗಳಲ್ಲಿ
ಎದ್ದು ಕಾಣುವ ಪ್ರಾಣಿಗಳೆಂದರೆ ದನಗಳು, ನಾಯಿಗಳು, ಬೆಕ್ಕುಗಳು, ಕಾಗೆಗಳು, ಅಳಿಲುಗಳು, ಹದ್ದುಗಳು,
ಇಲಿಗಳು, ಪಾರಿವಾಳಗಳು ಹಾಗೂ ಕೆಲವೇ ಕಡೆಗಳಲ್ಲಿ ಗಿಳಿಗಳು. ಅಪವಾದವೆಂಬಂತೆ ಕೃಷ್ಣರಾಜ ಮಾರುಕಟ್ಟೆಯ
ಅಕ್ಕಿ ಅಂಗಡಿಯ ಮುಂದೆ ಒಮ್ಮೆ ಹಾಗೂ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಒಳಗೆ ಗುಬ್ಬಿಗಳ
ಕಲರವವನ್ನು ನೋಡಿ ನಗರ ಪರಿಸರದಲ್ಲೂ ಗುಬ್ಬಿಗಳು ಪೂರ್ಣ ನಾಶವಾಗಿಲ್ಲ ಎಂಬುದಾಗಿಯೂ ತಿಳಿದೆ.
ಸಧ್ಯಕ್ಕೆ ಈ ಲೇಖನಮಾಲೆಯು
ಬೀದಿ ನಾಯಿಗಳ ಪ್ರಪಂಚದ ಬಗ್ಗೆ ಸೀಮಿತವಾಗಿರುತ್ತದೆ. ಲಗಾಯ್ತಿನಿಂದ ಬೆಂಗಳೂರು “ಅಡ್ಜೆಸ್ಟ್ ಮಾಡ್ಕೋ
ಗುರು” ಎಂಬ ತತ್ವವನ್ನೇ ಹೆಚ್ಚು ಅವಲಂಬಿಸಿದ್ದು, ಹೇಗೆ ಜನರು ಬೀದಿನಾಯಿಗಳ ಸುತ್ತ ಅಡ್ಜೆಸ್ಟ್ ಆಗಿದ್ದಾರೆ
ಎಂಬುದು ನನ್ನ ಕುತೂಹಲವನ್ನು ಕೆರಳಿಸಿದರೆ, ಅದಕ್ಕಿಂತ ಮಿಗಿಲಾಗಿ ಈ ನಾಯಿಗಳು ಮನುಷ್ಯರ ಸುತ್ತ ಇನ್ನೂ
ಪರಿಣಾಮಕಾರಿಯಾಗಿ ಅಡ್ಜೆಸ್ಟ್ ಆಗಿದ್ದು ನನ್ನನ್ನು ಮೆಚ್ಚಿಸಿತು. ಮೊದಮೊದಲು ಕುತೂಹಲ, ಆಮೇಲೆ ಛಾಯಾಗ್ರಹಣ,
ಕೃಮೇಣ ಮನುಷ್ಯ ಸಂಬಂಧಗಳನ್ನು ಮೀರಿ ನನಗೆ ಗಹನವಾದ ಅರ್ಥಗಳನ್ನು ಕೊಡಬಲ್ಲ ಅವುಗಳ ನೈಸರ್ಗಿಕ ಸ್ವಭಾವದ
ಆಕರ್ಷಣೆ, ಕೊನೆಯಲ್ಲಿ ಈ ನಾಯಿಗಳ ಹುಟ್ಟುವಿಕೆಯ ವಿಷವರ್ತುಲಕ್ಕೆ ನಮ್ಮ ನಾಗರಿಕ ವ್ಯವಸ್ಥೆಯ ಅಧ್ವಾನಗಳೇ
ಕಾರಣಗಳೆಂದು ತಿಳಿದ ಮೇಲೆ ನನ್ನ ನೆರೆಕೆರೆಯ ನಾಯಿಗಳು ಹಸಿವಿನಿಂದ ನರಳಬಾರದೆಂಬ ನೈತಿಕ ನಿಲುವಿಗೆ
ನಾ ಬದ್ಧನಾದೆ, ನಾನಿಡುವ ಆಹಾರದ ಸುತ್ತ ನಾಯಿ ಪ್ರಪಂಚಗಳ ಮೇಲುಬೀಳುಗಳ ಅವಲೋಕನ ಹೀಗೆ ನಾಯಿಪಾಡೇ ನನ್ನ
ಜೀವನದ ಅರ್ಥವೊಂದಾಗಿ ಹೋಯಿತು. ಈ ನಾಯಿಗಳ ಮೇಲೆ ಮನುಷ್ಯರ ಪ್ರಭಾವ ಇದ್ದ ಹಾಗೇ ಮನುಷ್ಯರ ಮೇಲೂ ಅವುಗಳ
ಪ್ರಭಾವವೂ ಇದ್ದುದನ್ನು ಗಮನಿಸಿ, ಸಸ್ಯ-ಪ್ರಾಣಿ-ಮಾನವ ಈ ಸಂಕುಲಗಳ ನಡುವಿನ ಜೀವನ ಸಮನ್ವಯದ ಕುರಿತಾದ
ನನ್ನ ಆಸಕ್ತಿ ಬೆಳೆಸುತ್ತಾ ಹೋದೆ. ಬೆಂಗಳೂರಿನ ಮಾನವ ನಾಗರಿಕತೆಯಲ್ಲಿ ಕಾಡು ಮನುಷ್ಯನ ಗುಣವೂ ಆಗಾಗ
ರಾರಾಜಿಸುವುದನ್ನು ನೋಡಿದ ಮೇಲೆ, ಅದನ್ನು ಒಪ್ಪಿ ಅಪ್ಪಿಕೊಂಡ ಮೇಲೆ, ಸಸ್ಯ, ಪ್ರಾಣಿ ಮತ್ತು ಮಾನವರ
ನಡುವಿನ ಜೀವನದ ಕೊಡು ತೆಕೋ ವ್ಯವಹಾರಗಳು ಸಾಕಷ್ಟು ಇರುವುದನ್ನು ಗಮನಿಸಿದ ಮೇಲೆ, ಬೆಂಗಳೂರು ಬಸ್ಸುಗಳ
ಮೇಲೆ ಕಾಡಿಲ್ಲದೇ ನಾಡಿಲ್ಲ ಎಂಬ ಸರಕಾರದ ಘೋಷಣೆಗಳನ್ನೇ ಓದಿದ ಮೇಲೆ, ಎಲ್ಲೆಲ್ಲೂ ಕಾಡೇ ನಾಡಾಗುತ್ತಿರುವಾಗ,
ನಾಡಿನಲ್ಲೇ ಕಾಡಾಗಬಾರದೇಕೆ ಎಂಬ ಪ್ರಶ್ನೆಯನ್ನೇ ಹಾಕಿಕೊಂಡೆ. ನನ್ನ ಮನೆಯ ಮೇಲೆ ಮತ್ತು ಸುತ್ತಲೂ
ನಾಡಿನ ಕಾಡನ್ನೇ ಮಾಡಹೊರಟೆ, ಸಾಧ್ಯವಾದಷ್ಟು ಮಟ್ಟಿಗೆ ಮಾಡಿ ನಲಿದಿದ್ದೇನೆ. ಕಾಡು-ನಾಡು-ಪ್ರಾಣಿ-
ಸಸ್ಯ-ಮನುಷ್ಯ-ನಾಗರಿಕತೆ-ಪರಿಸರ ಹೀಗೆ ಇವೆಲ್ಲಗಳ ಒಟ್ಟು ಸಮನ್ವಯಕ್ಕಾಗಿ ಮನುಷ್ಯರಾದ ನಾವು ಏನೇನು
ಮಾಡಬೇಕಾಗಿದೆ ಎಂಬ ಚಿಂತನೆಯನ್ನು ಮುಂದುವರಿಸುತ್ತಲೇ ಬಂದಿದ್ದೇನೆ.
ಇನ್ನೊಂದು ಕಡೆ ನಾಯಿ
ಪಾಡು ಮತ್ತು ಮನು಼ಷ್ಯನ ಪಾಡು ಇವುಗಳ ನಡುವಿನ ಸಾಂಗತ್ಯವನ್ನೂ ಗಮನಿಸುತ್ತಾ ಬಂದಿದ್ದೇನೆ.ಆಧ್ಯಾತ್ಮ
ಚಿಂತನೆ ಹಾಗೂ ತಾತ್ವಿಕ ಚಿಂತನೆಗಳಲ್ಲಿ ಬೀದಿ ನಾಯಿಗಳ ವಾಸ್ತವವನ್ನು ಹೊರಗಿಡುವುದೇ ವಿವೇಕವೆಂದು
ತಿಳಿದಿದ್ದೇನೆ. ಮಾನವ ಪಾಡಿನ ಸುತ್ತ ಸಾಕಷ್ಟು ನನ್ನದೇ ರೀತಿಯಲ್ಲಿ ಸಂಶೋಧನೆ ಮಾಡುತ್ತಿರುವ ನನಗೆ
ಈ ಸಂಶೋಧನೆಯಲ್ಲಿ ಮಾನವನನ್ನು ಬರೇ ನಾಗರಿಕತೆಯ ಮಾನವಶಾಸ್ತ್ರಗಳ ತಳಹದಿಯಲ್ಲಿ ಮಾತ್ರ ನೋಡದೇ ಒಟ್ಟು
ಪರಿಸರದ ಆಧಾರದಲ್ಲಿ ನೋಡುವುದೇ ಮುಖ್ಯವಾಗಿ ಕಂಡಿದೆ. ಹಾಗಾಗಿ ನಾಡಿನ ಪ್ರಾಣಿ ಪ್ರಪಂಚ ಅಪೂರ್ವವಾಗಿ
ನನ್ನ ಗಮನ ಸೆಳೆದಿದೆ, ಆ ಪ್ರಪಂಚದಲ್ಲಿ ಬೀದಿ ನಾಯಿಗಳದ್ದೇ ಪ್ರಮುಖ ಆಕರ್ಷಣೆಯಾಗಿದೆ, ಕಾರಣ ನಾಯಿ
ಪಾಡು ಹಾಗೂ ಮಾನವ ಪಾಡುಗಳ ನಡುವಿನ ಸಾಂಗತ್ಯಗಳು ಹಾಗೂ
ಬೀದಿನಾಯಿಗಳ ಬದುಕಿನ ಹೋರಾಟದ ಸುತ್ತ ಮಾನವ ಬದುಕಿನ ಹೋರಾಟದಲ್ಲಿ ಹೆಚ್ಚು ಅರ್ಥವನ್ನೂ ಹಾಗೂ
ಸಾಧ್ಯತೆಗಳನ್ನೂ ಹುಟ್ಟಿಸುವ ಸ್ಫೂರ್ತಿಗಳನ್ನು ಕಂಡೆ. ಈ ಸಂಶೋಧನೆಯ ಸುತ್ತ ನನ್ನ ವೈಯಕ್ತಿಕ ಜೀವನವನ್ನೂ
ನನಗರಿವಿಲ್ಲದೇ ನಾಯಿಪಾಡಿಗೆ ಇಳಿಸಿಕೊಂಡೆ ಹಾಗೂ ನಾಯಿಪಾಡಿನಲ್ಲೂ ಮಾನವ ಜೀವನಕ್ಕೆ ಹೇಗೆ ಅರ್ಥಗಳನ್ನು
ಕಲ್ಪಿಸಿ ಜೀವನದ ಆಟವನ್ನು ಅಮೋಘವಾಗಿ ಗೆಲ್ಲಬಲ್ಲ ಎಂಬ ಸತ್ಯಗಳನ್ನೂ ಕಂಡುಕೊಂಡೆ. ನಮ್ಮ ವಾಸ್ತವದ
ಅರಿವಿಲ್ಲದ ಆಧ್ಯಾತ್ಮ ಬರೇ ಬೊಗಳೆಯಾಗಿ ನಾಯಿ ಬೊಗಳುವುದಕ್ಕಿಂತಲೂ ಅರ್ಥಹೀನವಾಗುವುದನ್ನೂ ಗಮನಿಸಿದ್ದೇನೆ.
ವಾಸ್ತವದ ಅರಿವಿನ ಸುತ್ತ ಸಂಶೋಧಿಸುತ್ತಾ “ನಾನು” ಎಂಬ ಅಸ್ತಿತ್ವ ಹಾಗೂ ಅದರ ಸುತ್ತಲಿನ ಒಟ್ಟು ಪ್ರಪಂಚ
ಇವೆರೆಡರಲ್ಲೂ ಸ್ತರಗಳನ್ನು ಗಮನಿಸಿ ಅವುಗಳನ್ನು ಅರ್ಥವಿಸುತ್ತಾ ಹೋದೆ. “ಯೋಗ”ವು ಸಾರುವ ಪೂರ್ಣತೆಯ
ಅನುಭಾವದ ಸಂಪೂರ್ಣ ಶರಣಾಗತಿಯ ಸಿದ್ಧಿಯನ್ನೂ ಪಡೆದುಕೊಂಡೆ, ಸಧ್ಯಕ್ಕೆ ಅಂತಹ “ನಾಕ”ದ ನಿತ್ಯ ಸುಖದ
ವೇದಿಕೆಯಲ್ಲೇ ಇದ್ದು ಉಳಿದ “ನರಕ”ಗಳ ಜೊತೆಗೆ ಅನುಸಂಧಾನವನ್ನು ಏರ್ಪಡಿಸುವ ಸಾಧ್ಯತೆ ಹಾಗೂ ಬಾಧ್ಯತೆಗಳ
ಬಗ್ಗೆ ಸಂಶೋಧನೆ ಮುಂದುವರಿದಿದೆ, ಆ ಮೂಲಕ ದೇಶ ಹಾಗೂ ಕಾಲದ ನಿತ್ಯ ಬದಲಾವಣೆಯ ಸುತ್ತಲಿನ ವಿಧಿಯ ನೃತ್ಯವಿವಿಧ್ಯಗಳ
ಹೊಸ ಕಲಾಪ್ರಪಂಚವೇ ಅನಾವರಣಗೊಳ್ಳುತ್ತಿದೆ. ನೈಸರ್ಗಿಕವಾದ ಪರಿಸರದ ಭಾಗ್ಯಗಳು, ಮಾನವ ಸಾಧ್ಯತೆಗಳು, ವಿಧಿಯ ಅಮೋಘ ನಿತ್ಯ ನೃತ್ಯದ ಆಟ, ಇದರ
ಹಿಂದೆ ಇರಬಹುದಾದ ದೇವರ ಆಟ, ಆ ಆಟದಲ್ಲಿನ ಓಟಗಳಲ್ಲಿರಬಹುದಾದ voluntary & involuntary
(autonomous and otherwise) ತತ್ವಗಳ ಸ್ಪಷ್ಟತೆ, ಎಲ್ಲಕ್ಕಿಂತ ಮುಖ್ಯವಾಗಿ ನಿಸರ್ಗ-ಮಾನವ-ವಿಧಿ-ದೇವರು
ಈ ಎಲ್ಲಾ ಗೊಂದಲಮಯ ನಿತ್ಯ ವ್ಯವಹಾರಗಳ ನಡುವಿನ ಅರ್ಧ ಸತ್ಯಗಳ ನಡುವೆ ಈ ಆಧುನಿಕ ಪ್ರಪಂಚದಲ್ಲಿ ವೈಯಕ್ತಿಕ
ಬದುಕಿಗೂ ಹಾಗೂ ಅದರ ಸುತ್ತಲಿನ ಸ್ತರಗಳಲ್ಲಿರುವ ಸಾಂಘಿಕವಾದ
ನಾಗರಿಕ ಬದುಕಿಗೂ(which includes economy, politics, technology, culture,
philosophy etc.) ನಡುವಿನ ಹೆಚ್ಚಿನ ಸಮನ್ವಯ ಸಾಧಿಸುವತ್ತ ಹೊಸ ವಿಶ್ವ ಧರ್ಮವೇ ಸ್ಥಾಪಿತವಾಗಲು
ಬೇಕಾಗುವ ಪೂರ್ವಭಾವಿ ಸಂಶೋಧನೆಗಳಿಗೇ ನನ್ನ ಉಳಿದ ಜೀವನವನ್ನು ಹವ್ಯಾಸವಾಗಿ ಸಮರ್ಪಿಸಿಕೊಂಡಿದ್ದೇನೆ.
ಅಯ್ಯಬ್ಬಾ, ಈ ಬೀದಿ
ನಾಯಿಗಳ ಜಾಡು ಹಿಡಿದು ಹೊರಟದ್ದು, ಎಲ್ಲೆಲ್ಲೋ ಹೋಗಿ, ಭಗವಂತನನ್ನೂ ದಾಟುವ ಧ್ರಾಷ್ಟ್ಯವನ್ನೂ ಬೆಳೆಸಿದುದು
ಒಂದು ಕಡೆಯಾದರೆ ನಾಯಿಪಾಡಿನ ಸುತ್ತಲೂ ಶರಣಾಗತಿಯನ್ನು ಕರುಣಿಸಿ, ಎಲ್ಲಾ ರೀತಿಯ ಎಲ್ಲಾ ಹುಚ್ಚುಗಳ
ಸುತ್ತ ಅನುಸಂಧಾನವನ್ನೇರ್ಪಡಿಸುವ ವಿವೇಕದ ಸಾಧ್ಯತೆಯನ್ನೂ ದಯಪಾಲಿಸಿದೆ, ನನ್ನ ವೈಯಕ್ತಿಕ ಬದುಕಿನ
ಆಟಕ್ಕೆ ಅತಿಯಾದ ರಂಗೇರಿಸಿ ನಿನ್ನಿಂದೇನು ಕೊಡುಗೆ ಮುಂದೆ ಎಂಬ ಸವಾಲನ್ನೂ ಒಡ್ಡಿದೆ. ಮುಂದಿನ ದಾರಿ
ದುರ್ಗಮವಿದೆ, ಈವರೆಗೆ ಬಂದ ದಾರಿಯಲ್ಲಿನ ಪಾಠಗಳಲ್ಲೇ ಆ ಕುರಿತ ಮಾರ್ಗದರ್ಶನವಿದೆ ಎಂಬುದಾಗಿ ನಂಬಿದ್ದೇನೆ.
ಈವರೆಗೆ ಬಂದ ದಾರಿಯ ಜಾಡನ್ನು ಕೂಲಂಕಷವಾಗಿ ಅವಲೋಕಿಸಲೇ ಬೇಕಾಗಿದೆ, ಆ ಪ್ರಯತ್ನದಲ್ಲಿ ನನ್ನ ಸುತ್ತಲಿನ
ಪ್ರಪಂಚದ ಎಲ್ಲಾ ಆಟಗಾರರನ್ನು ಸೇರಿಸಿಕೊಳ್ಳ ಬೇಕಾಗಿದೆ. ಈ ಲೇಖನಮಾಲೆಯು ಅಂತಹ ಅನೇಕ ಆಟಗಾರರಲ್ಲಿ
ಬೀದಿ ನಾಯಿಗಳೊಂದಿಗೆ ಬಂದ ದಾರಿಯನ್ನು ಮಾತ್ರ ನೆನಪಿಸಿಕೊಂಡು ಹಳೇ ಅರ್ಥಗಳ ಮನನದೊಂದಿಗೆ ಹೊಸ ಅರ್ಥಗಳ
ಸಾಧ್ಯತೆಯನ್ನೂ ನನಗೆ ಕೊಡಬಲ್ಲದೆಂಬ ನಂಬಿಕೆಯೂ ಇದೆ.
ಎಲಾ ಇವನ, ಬೀದಿ
ನಾಯಿಗಳ ಕುರಿತಾಗಿ ಬರೆಯುತ್ತೇನೆ ಎಂದವ ತತ್ವಜ್ಞಾನದ ಬಿಸಿ ಬಾಣಾಲೆಯಲ್ಲಿ ಹಾಕಿ ಮುಗುಚಿ ಮುಗುಚಿ
ಹದಮೀರಿ ಸುಡುತ್ತಿದ್ದಾನಲ್ಲ ಈ ಬಡ್ಡೀಮಗ ಎಂದೆನಿಸಬಹುದು ನಿಮಗೆ. ಈ ಅರ್ಥಹೀನ ಹವ್ಯಾಸಗಳ ಹಿಂದೆ ಮಾನವ
ಅಭಿವ್ಯಕ್ತಿಗಳ ಹಿಂದಿನ ಅರ್ಥಗಳನ್ನು ಹೆಚ್ಚಿಸುವ ಹಾಗೂ ವಿಮೋಚನೆಗಳ ದಾರಿಗಳ ದುರ್ಗಮತೆಯನ್ನೂ ಇಳಿಸುವ
ಆಶಯಗಳಿವೆ ಎಂಬುದಾಕ್ಕಾಗಿಯೇ ಆ ಕಡೆ ಸ್ವಲ್ಪ ಎಲ್ಲೆ ಮೀರಿಯೇ ಎಳೆದೆ, ಕ್ಷಮೆ ಇರಲಿ.
ಮುಂದಿನ ಕಂತಿನಲ್ಲಿ,
ನಾನೂ ಹಾಗೂ ನನ್ನ ಕಾರಿನಲ್ಲಿನ ಸಹ ಪ್ರಯಾಣಿಕರು ಬೀದಿ ನಾಯಿಗಳನ್ನು ಗಮ್ಮತ್ತಿನಲ್ಲಿ ಗಮನಿಸುತ್ತಾ
ನಗರ ಸಂಚಾರದ ಜಂಜಡದಲ್ಲಿ ನಮ್ಮ ಮಜವನ್ನು ಸುಲಭದಲ್ಲಿ ಹೆಚ್ಚಿಸಿದ ಕಥೆ ಹೇಳುವೆ.
ನಮಸ್ತೆ
ನಟರಾಜ ಉಪಾಧ್ಯ
No comments:
Post a Comment